ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್ ಮಾಫಿಯಾದ ಘಾಟು ಇದೆಯೆಂಬ ಆರೋಪದ ಮೇರೆಗೆ ಸಿಸಿಬಿ ಅಧಿಕಾರಿಗಳು ಸೈಲೆಂಟಾಗಿ ನಟಿ ರಾಗಿಣಿ ದ್ವಿವೇದಿಗೆ ಮೊದಲು ನೋಟಿಸ್ ಜಾರಿಗೊಳಿಸಿ, ನಂತರ ಏಕಾಏಕಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿದ್ರು. ಜೊತೆಗೆ ಸಂಜನಾ ಮನೆ ಮೇಲೂ ದಾಳಿ ನಡೆಸಿ ಈ ಇಬ್ಬರು ನಟಿಯರನ್ನು ಬಂಧಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಸದ್ಯ ಇನ್ಸ್ಪೆಕ್ಟರ್ ಅಂಜುಮಾಲಾ ನಡೆಸುತ್ತಿದ್ದಾರೆ.
ಈ ಎರಡು ದಾಳಿ ವೇಳೆ ಇನ್ಸ್ಪೆಕ್ಟರ್ ಅಂಜುಮಾಲಾ ಮಹತ್ತರ ಪಾತ್ರ ವಹಿಸಿದ್ದಾರೆ. ಇನ್ಸ್ಪೆಕ್ಟರ್ ಅಂಜುಮಾಲಾ ಅವರು ಸಿಸಿಬಿಯ ಮಹಿಳಾ ಇನ್ಸ್ಪೆಕ್ಟರ್ ಆಗಿದ್ದು, ನಗರದಲ್ಲಿ ನಡೆಯುವ ವೇಶ್ಯಾವಾಟಿಕೆ ದಂಧೆ, ಮಹಿಳೆಯರ ಮೇಲಿನ ದೌರ್ಜನ್ಯ ಇಂತಹ ಪ್ರಕರಣಗಳನ್ನು ಮಟ್ಟ ಹಾಕುವಲ್ಲಿ ಮಹತ್ತರ ಕೆಲಸ ಮಾಡಿದ್ದಾರೆ.
ಡ್ರಗ್ಸ್ ಜಾಲದಲ್ಲಿ ಇಬ್ಬರು ನಟಿಯರ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನೂ ಸಹ ಮೊದಲು ವಿಚಾರಣೆ ನಡೆಸಿದ ಹೆಗ್ಗಳಿಕೆ ಅಂಜುಮಾಲಾ ಅವರಿಗೆ ಸಲ್ಲುತ್ತದೆ. ಇಬ್ಬರ ಮನೆಗೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ತೆರಳಿದಾಗ ನಟಿಯರು ಇನ್ಸ್ಪೆಕ್ಟರ್ ಅಂಜುಮಾಲಾ ಬಳಿ ಏಕಾಏಕಿ ಮುಂಜಾನೆಯೇ ಹೇಗೆ ಬಂದ್ರಿ, ಕರೆದರೆ ನಾವೇ ವಿಚಾರಣೆಗೆ ಹಾಜರಾಗುತ್ತಿದ್ದೆವು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅಂಜುಮಾಲ, ನಮ್ಮ ಬಳಿ ನ್ಯಾಯಾಲಯದಿಂದ ಪಡೆದಿರುವ ಸರ್ಚ್ ವಾರೆಂಟ್ ಇದೆ. ನಿಮ್ಮ ವಿರುದ್ಧದ ಡ್ರಗ್ಸ್ ಪ್ರಕರಣ ಆರೋಪಕ್ಕೆ ಸಂಬಂಧಿಸಿದಂತೆ ಶೋಧ ನಡೆಸುತ್ತೇವೆ ಎಂದು ಹೇಳಿ ನಟಿಯರಿಬ್ಬರ ಪರ್ಸನಲ್ ವಸ್ತುಗಳಿಂದ ಹಿಡಿದು ಪ್ರತಿಯೊಂದನ್ನು ಜಾಲಿಸಿ ತನಿಖೆಗೆ ಬೇಕಾದ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದರು. ಈ ವೇಳೆ ಅವರಿಗೆ ಇಬ್ಬರು ಮಹಿಳಾ ಸಿಬ್ಬಂದಿ ಸಹಾಯ ಮಾಡಿದ್ದರು.
ಈ ಖಡಕ್ ಮಹಿಳಾ ಪೊಲೀಸ್ ತನಿಖಾಧಿಕಾರಿ ಉತ್ತರ ಕನ್ನಡ ಜಿಲ್ಲೆಯವರು. ಅಂಕೊಲಾ ತಾಲೂಕಿನ ಶಿರಗುಂಜಿಯ ನಿವೃತ್ತ ಶಿಕ್ಷಕರಾದ ತಿಮ್ಮಣ್ಣ ಹಾಗೂ ಶಾಂತಿ ದಂಪತಿಯ ಮಗಳಾದ ಅಂಜುಮಾಲಾ ನಾಯಕ 2000ರಲ್ಲಿ ಬೆಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳಾ ಪಿಎಸ್ಐ ಆಗಿ ಅಧಿಕಾರ ಸ್ವೀಕಾರ ಮಾಡಿದರು. 2015ರಲ್ಲಿ ಮುಖ್ಯಮಂತ್ರಿಯಿಂದ ಚಿನ್ನದ ಪದಕ, ಕೆಂಪೇಗೌಡ ಪ್ರಶಸ್ತಿಯನ್ನೂ ಕೂಡ ಮುಡಿಗೇರಿಸಿಕೊಂಡಿದ್ದಾರೆ.
ಹಾಗೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಐಎಎಸ್ ಅಧಿಕಾರಿಯೊಬ್ಬರು ಹೆಂಡತಿ ಮದ್ಯಪಾನ ಮಾಡಿ ಪ್ರವೇಶ ಮಾಡಿದಾಗ ಆಗ ಆಕೆಯನ್ನು ಬಂಧಿಸಿ ಖಡಕ್ ವಾರ್ನಿಂಗ್ ನೀಡಿದ್ದರು. ಸದ್ಯ ನಟಿ ರಾಗಿಣಿ ಹಾಗೂ ಸಂಜನಾ ವಿಚಾರಣೆಯನ್ನು ಸಹ ಇವರೇ ನಡೆಸುತ್ತಿದ್ದಾರೆ.