ಬೆಂಗಳೂರು: ಕೋವಿಡ್-19 ಮಾರ್ಗಸೂಚಿಯನ್ನು ಉಲ್ಲಂಘಿಸಿದ ಆರೋಪದಡಿ ಜೈಲು ಸೇರುವ ಭೀತಿಯಲ್ಲಿರುವ ಬಿಬಿಎಂಪಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಬೆಂಬಲಿಗರಿಗೆ ನಿರೀಕ್ಷಣಾ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯವು ನಿರಾಕರಿಸಿದೆ.
ನಿರೀಕ್ಷಣಾ ಜಾಮೀನು ಕೋರಿ ಆಕಿಬ್ ಪಾಷಾ ಸೇರಿದಂತೆ 6 ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನಗರದ 69ನೇ ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಜಾಮೀನು ನೀಡಿದರೆ ಆರೋಪಿಗಳು ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ಮುಂದೆಯೂ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಕರಣ ತನಿಖಾ ಹಂತದಲ್ಲಿದ್ದು, ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಬಾರದು ಎಂಬ ಸರ್ಕಾರಿ ಅಭಿಯೋಜಕರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ: ಬಿಬಿಎಂಪಿಯ ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಜೂನ್ 7ರಂದು ಬಿಡುಗಡೆಯಾಗಿದ್ದರು. ಈ ವೇಳೆ ಇಮ್ರಾನ್ರನ್ನು ಬೆಂಬಲಿಗರಾದ ಆಕಿಬ್ ಪಾಷಾ ಸೇರಿದಂತೆ ಮತ್ತಿತರರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿದ್ದರು. ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಡಿ ಪಾಷಾ ಮತ್ತು ಕೆಲ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಸ್ತುತ ಪಾಷಾ ಮತ್ತಿತರರು ಜಾಮೀನು ಮೇಲೆ ಬಿಡುಗಡೆಯಾಗಿದ್ದರೂ, ಕೆಲವರು ಈಗಲೂ ಪೊಲೀಸರಿಗೆ ಸಿಗದೇ ಬಂಧನಕ್ಕೊಳಗಾಗುವ ಭೀತಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.