ಬೆಂಗಳೂರು: ಕೊರೊನಾ ಸೋಂಕು ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದೆ. ವಿಶ್ವದೆಲ್ಲೆಡೆ ಸಾವಿರಾರು ಜನರು ಬಲಿಯಾಗಿದ್ದು, ಲಕ್ಷಾಂತರ ಜನರು ಹೋಮ್ ಕ್ವಾರಂಟೈನ್ನಲ್ಲಿ ಲಾಕ್ ಆಗಿದ್ದಾರೆ.
ವೈದ್ಯ ಹಾಗೂ ಪೊಲೀಸ್ ಸಮೂಹವೇ ನಾಗರಿಕರ ಪ್ರಾಣ ರಕ್ಷಣೆಗೆ ಪಣ ತೊಟ್ಟಿದೆ. ಈ ಸಂದರ್ಭದಲ್ಲಿ ರಾಜ್ಯ ಅಗ್ನಿಶಾಮಕ ಇಲಾಖೆ ಸಹ ನಗರದ ಸ್ವಚ್ಛತೆಗಾಗಿ ಅವಿರತ ಶ್ರಮ ಪಡುತ್ತಿದ್ದು, ಬಿಬಿಎಂಪಿ ನೆರವಿನಿಂದ ನಗರದ ಪ್ರತಿ ಮೂಲೆ ಮೂಲೆಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಔಷಧಿ ಸಿಂಪಡಗೆ ಮುಂದಾಗಿದೆ.
ಮಾರ್ಚ್ 24ರಂದು ಟೌನ್ಹಾಲ್ ಮುಂದೆ ಅಧಿಕೃತವಾಗಿ ರೋಗ ನಿರೋಧಕ ರಾಸಾಯನಿಕ ದ್ರವ್ಯ ಸಿಂಪಡಿಸುವುದಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು.
ಬೆಂಗಳೂರಿನಲ್ಲಿ 4 ಸಬ್ ಡಿವಿಷನ್ಗಳಲ್ಲಿರುವ 15ಕ್ಕಿಂತ ಹೆಚ್ಚು ಅಗ್ನಿಶಾಮಕ ಠಾಣೆ ವ್ಯಾಪ್ತಿಗಳಲ್ಲಿ ರಾಸಾಯನಿಕ ಸಿಂಪಡಿಸಲಾಗುತ್ತಿದೆ. ಈಗಾಗಲೇ ನಗರದ ಬಹುತೇಕ ಕಡೆಗಳಲ್ಲಿ ಔಷಧಿ ಸಿಂಪಡಿಸುವ ಮೂಲಕ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಂಡಿದ್ದಾರೆ. ಬಿಬಿಎಂಪಿ ನೆರವಿನಿಂದ ನೀರಿನ ಜೊತೆ ಬ್ಲೀಚೀಂಗ್ ಪೌಡರ್ ಮಿಶ್ರಣ ಮಾಡಿ ವಾಹನಗಳ ಮುಖಾಂತರ ಎಲ್ಲಾ ಕಡೆ ಸ್ಪ್ರೇ ಮಾಡಲಾಗುತ್ತಿದೆ.
ದಿನವೊಂದಕ್ಕೆ 9 ಸಾವಿರ ಲೀಟರ್ನಂತೆ ಕಳೆದ ಎಂಟು ದಿನಗಳಲ್ಲಿ 72 ಸಾವಿರ ಲೀಟರ್ ಔಷಧಿ ಸಿಂಪಡಿಸಲಾಗಿದೆ. ನಗರದ ಪ್ರಮುಖ ರಸ್ತೆ, ಜಂಕ್ಷನ್ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ.
ಪೊಲೀಸರಂತೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸಹ ಕೊರೊನಾ ಸೋಂಕು ಹರಡದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸಮರ್ಪಕ ರೀತಿಯಲ್ಲಿ ಗುಣಮಟ್ಟದ ಮಾಸ್ಕ್, ಗ್ಲೌಸ್ಗಳು ನಮಗೆ ನೀಡದಿರುವುದು ಕೆಲಸದ ವೇಗಕ್ಕೆ ಅಡ್ಡಿಯಾಗಿದೆ. ನಾವು ಸಹ ಕೊರೊನಾ ವೈರಸ್ ವ್ಯಾಪ್ತಿಸದಂತೆ ಕೆಲಸ ಮಾಡುತ್ತಿದ್ದೇವೆ. ನಮಗೂ ಗುಣಮಟ್ಟದ ಮಾಸ್ಕ್ ಸೇರಿದಂತೆ ಇನ್ನಿತರ ಪರಿಕರ ನೀಡಿದರೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆಯಾಗಲಿದೆ ಎಂದು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಈಟಿವಿ ಭಾರತಕ್ಕೆ ತಿಳಿಸಿದರು.