ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಎಸ್‌ಐಟಿ ತನಿಖಾಧಿಕಾರಿಗಳು ನಡೆಸಿದ ತನಿಖೆ ವೇಳೆ ಸಕ್ಷಮ ಪ್ರಾಧಿಕಾರ ಪ್ರಾದೇಶಿಕ ಆಯುಕ್ತರು ನಿಯೋಜಿಸಿರುವ ಅಧಿಕಾರಿಗಳೊಂದಿಗೆ ಜಂಟಿಯಾಗಿ ಐಎಂಎ ಸಂಸ್ಥೆಗೆ ಸಂಬಂಧಿಸಿದ 2.15 ಕೋಟಿ. ರೂ.ಮೊತ್ತದ ಚರಾಸ್ತಿ ಮತ್ತು 2.20ಕೋಟಿ ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಐಎಂಎ ಗೋಲ್ಡ್ ಜಯನಗರ, ಯಶವಂತಪುರ, ಶಿವಾಜಿನಗರ, ತಿಲಕನಗರ, ಐಎಂಎ ಪಬ್ಲಿಷರ್ಸ್ ಪ್ರೈವೆಟ್ ಲಿಮಿಟೆಡ್, ಬನ್ನೇರುಘಟ್ಟ ರಸ್ತೆ, ಶೋಧನಾ ಕಾಲದಲ್ಲಿ ಪೀಠೋಪಕರಣಗಳು ಸೇರಿದಂತೆ ಚರಾಸ್ಥಿಗಳನ್ನು ಪಟ್ಟಿ ಮಾಡಿ ಮಹಜರ್ ಮೂಲಕ ಇನ್‌ವೆಂಟ್ರಿ ಮಾಡಿ ಆ ವಸ್ತುಗಳನ್ನು ಸಕ್ಷಮ ಪ್ರಾಧಿಕಾರದ ಮೂಲಕ ಹರಾಜು ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು. ಇವುಗಳ ಒಟ್ಟು ಮೌಲ್ಯ 2.15 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಐಎಂಎ ಸಂಸ್ಥೆಯಿಂದ ಆರೋಪಿ ಮೊಹಮದ್ ಮನ್ಸೂರ್ ಖಾನ್, ಅಬ್ದುಲ್ ಸಾಬೀರ್ ಎಂಬುವರೊಂದಿಗೆ ಸ್ಕೈವಾಕ್ ನಿರ್ಮಾಣ ವ್ಯವಹಾರ ಹೊಂದಿದ್ದು, ಈ ಪ್ರಕರಣದ ತನಿಖೆಯಲ್ಲಿ 2 ಕೋಟಿ ರೂ.ಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಬ್ದುಲ್ ಸಾಬೀರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಈ ವ್ಯವಹಾರದ ಬಗ್ಗೆ ಒಪ್ಪಿದ್ದು, ತಾನು ಪಡೆದಿದ್ದ 2 ಕೋಟಿ ರೂ.ಗಳನ್ನು ಡಿಡಿ ಮೂಲಕ ಹಿಂತಿರುಗಿಸಿದ್ದಾನೆಂದು ತನಿಖಾ ತಂಡದ ಮುಖ್ಯತನಿಖಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
ಅಲ್ಲದೇ ಈ ಹಣವನ್ನು ದಿ ರಿಜಿಸ್ಟ್ರಾರ್ ಸಿಟಿ ಸಿವಿಲ್ ಕೋರ್ಟ್ ಬೆಂಗಳೂರು ಇವರ ಖಾತೆಗೆ ಜಮಾ ಮಾಡಲಾಗುವುದು. ಅಲ್ಲದೇ ಮನ್ಸೂರ್ ಖಾನ್‌ನ ನವನೀತ್ ಮೋಟಾರ್ಸ್ ಪ್ರೈಲಿ.ನಲ್ಲಿ ಬಿಎಂಡಬ್ಲೂ ಕಾರನ್ನು ಕೊಂಡು ಕೊಳ್ಳಲು ಮುಂಗಡವಾಗಿ 10 ಲಕ್ಷ ರೂ.ಹಣವನ್ನು ನೀಡಿದ್ದರ ಬಗ್ಗೆ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಣವನ್ನು ನವನೀತ್ ಮೋಟರ್ಸ್ ಅವರಿಂದ ಡಿಡಿ ಮುಖಾಂತರ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.