ಬೆಂಗಳೂರು: ಹೂಡಿಕೆದಾರರಿಗೆ ಮೋಸ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಐಎಂಎ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್ ಖಾನ್ನ ಸ್ನೇಹಿತ, ಬಿಬಿಎಂಪಿಯ ನಾಮನಿರ್ದೇಶಿತ ಸೈಯದ್ ಮುಜಾಹಿದ್ನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇನ್ನು ಪ್ರಾಥಮಿಕ ತನಿಖೆಯಲ್ಲಿ ಮುಜಾಹಿದ್ ಬಳಿಯಿಂದ ಒಂದೊಂದೇ ರೋಚಕ ಕಹಾನಿಗಳು ಬೆಳಕಿಗೆ ಬರುತ್ತಿವೆ.
ಐಎಂಎನಲ್ಲಿ ತನ್ನ ಪಾಲು ಇರುವುದಾಗಿ ಒಪ್ಪಿಕೊಂಡಿರುವ ಸೈಯದ್, ತಾನು ಮನ್ಸೂರ್ ಹಾಗೂ ರಾಜಕೀಯ ಮುಖಂಡರ ನಡುವೆ ಬ್ರೋಕರ್ ಆಗಿದ್ದನ್ನು, ಮತ್ತು ವಿವಿಧ ರಂಗದ ದೊಡ್ಡ ದೊಡ್ಡ ಕುಳಗಳ ಜೊತೆ ಹಣದ ವ್ಯವಹರ ಮಾಡುತ್ತಿರುವ ಬಗ್ಗೆ ಎಸ್‍ಐಟಿ ಮುಂದೆ ಬಾಯ್ಬಿಟ್ಟಿದ್ದಾನೆ.
ಹಣ ದುರ್ಬಳಕೆ:
ಐಎಂಎ ಸಂಸ್ಥಾಪಕ ಮನ್ಸೂರ್ ಬಳಿಯಿಂದ ಸಾಕಷ್ಟು ಹಣವನ್ನ ಮುಜಾಹಿದ್ ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಣವನ್ನು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿ ಹಲವಾರಿಂದ ಹಣ ಲಪಟಾಯಿಸಿದ್ದಾನೆ. ಮುಜಾಹಿದ್ನ ಮನೆ ಶೋಧಿಸುತ್ತಿರುವಾಗ ಇದಕ್ಕೆ ಪೂರಕವಾದ ದಾಖಲೆಗಳು ಪತ್ತೆಯಾಗಿದೆ.
ವಿಐಪಿಗಳಿಂದ ಹೂಡಿಕೆ:
ಐಎಂಎ ಹಣ ದೋಚಿದ ಆರೋಪವಲ್ಲದೇ ಮುಜಾಹಿದ್ ಮೇಲೆ ಇನ್ನೊಂದು ಅರೋಪವಿದೆ. ಈತ ದೊಡ್ಡ ದೊಡ್ಡ ವಿಐಪಿ ಹಾಗೂ ವ್ಯಾಪಾರಸ್ಥರ ತಲೆ ಕೆಡಿಸಿ ಅಧಿಕ ಲಾಭ ಬರುತ್ತೆ ಐಎಂಎಗೆ ಹಣ ಹೂಡಿಕೆ ಮಾಡಿ ಎಂದು ಹೇಳಿ ಹಣ ಹೂಡಿಕೆ ಮಾಡಿಸಿದ್ದಾನೆ ಎಂಬ ವಿಚಾರ ಸಹ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.