ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಸೇರಿದಂತೆ ಅಂದು ಕರ್ತವ್ಯ ನಿರ್ವಹಿಸಿದ್ದ ಪೊಲೀಸರು ಹಾಗೂ ಇತರ ಅಧಿಕಾರಿಗಳನ್ನೊಳಗೊಂಡಂತೆ 28 ಜನರ ವಿರುದ್ಧ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಐಎಂಎ ವಂಚನೆ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ. ಕೆಪಿಐಡಿ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳದೇ, ಕಾನೂನಿನಡಿ ಸೂಕ್ತ ತನಿಖೆ ನಡೆಸದ ಆಗಿನ ಬೆಂಗಳೂರು ಉತ್ತರ ವಿಭಾಗದ ಸಹಾಯಕ ಆಯುಕ್ತ, ಸಿಐಡಿ ಆರ್ಥಿಕ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ಜನರಲ್, ಪೂರ್ವ ವಿಭಾಗದ ಡಿಸಿಪಿ, ಕಮರ್ಷಿಯಲ್ ಸ್ಟ್ರೀಟ್ಸ್ ಇನ್‌ಸ್ಪೆಕ್ಟರ್, ಪ್ರಕರಣದಲ್ಲಿ ಆರೋಪಿತರಾಗಿರುವ ಖಾಸಗಿ ವ್ಯಕ್ತಿಗಳು ಸೇರಿ 28 ಜನರ ವಿರುದ್ಧ ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ.
ಐಎಂಎ ವಂಚನೆ ವಿರುದ್ಧ ಸಾರ್ವಜನಿಕರು ನೀಡಿದ ದೂರುಗಳನ್ನು ಸರಿಯಾಗಿ ಪರಿಶೀಲನೆ ನಡೆಸದೇ ಮುಚ್ಚಿಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕೆಪಿಐಡಿ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಂಡಿಲ್ಲ. ಆರೋಪಿಗಳಿಗೆ ಕಾನೂನಿನಡಿ ಅಗತ್ಯ ಕ್ರಮ ಕೈಗೊಂಡಿಲ್ಲ. ಬದಲಿಗೆ ಅವರ ಮೇಲಿರುವ ಆರೋಪವನ್ನು ತಳ್ಳಿ ಹಾಕಿದ್ದಲ್ಲದೇ ದೂರುಗಳನ್ನು ಮುಚ್ಚಿಹಾಕುವಂತೆ ಶಿಫಾರಸು ಮಾಡಿದ್ದಾರೆ ಎನ್ನಲಾಗುತ್ತಿದ್ದು, ಐಎಂಎ ಜುವೆಲರ್ಸ್ ಯಾವುದೇ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಆದ್ದರಿಂದ ಐಎಂಎ ಕಂಪನಿ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿ ಕೊಟ್ಯಂತರ ರೂ. ಹಣ ಹೂಡಿಕೆ ಮಾಡಿಸಿಕೊಂಡಿದ್ದಲ್ಲದೇ ಸಾವಿರಾರು ಜನ ಹೂಡಿಕೆದಾರರಿಗೆ ಮೋಸ ಮಾಡಿದೆ ಎಂದು ಆರೋಪಿಸಲಾಗಿದೆ. ಇದೇ ಹಗರಣಕ್ಕೆ ಸಂಬಂಧಪಟ್ಟಂತೆ ಹಲವಾರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಈ ಕುರಿತು ಸಿಬಿಐ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.