ಬೆಂಗಳೂರು: ಐಎಂಎ ಕಂಪನಿಯ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ 21ನೇ ಆರೋಪಿ ಶಿವಾಜಿನಗರ ಮೌಲ್ವಿ ಮಹಮ್ಮದ್ ಹನೀಫ್ ಅಲಿಯಾಸ್ ಅಫ್ಸರ್ ಅಜೀಜ್ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ.
ಈ ಅರ್ಜಿಗೆ ಸಂಬಂಧಪಟ್ಟಂತೆ ನ್ಯಾಯಲಯ ಆಕ್ಷೇಪಣೆ ಸಲ್ಲಿಸಲು ಎಸ್ಐಟಿಗೆ ಸೂಚನೆ ನೀಡಿದೆ. ನ್ಯಾಯಲಯದಲ್ಲಿ ಇಂದು ಜಾಮೀನು ನೀಡುವ ಕುರಿತು ಅರ್ಜಿ ವಿಚಾರಣೆ ನಡೆಯಿತು. ವಂಚನೆ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ. ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದು ಪಡಿಸಿ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಕೋರಿದರು.
ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಕೋರಿಕೆಯಂತೆ ಮೌಲ್ವಿ ಮಹಮ್ಮದ್ ಹನೀಫ್ ಹಲವರಿಗೆ ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಲು ಪ್ರಚೋದನೆ ನೀಡಿದ್ದ ಎನ್ನುವ ಆರೋಪವಿದೆ. ಇದಕ್ಕೆ ಪ್ರತಿಯಾಗಿ ಆರೋಪಿ ಮನ್ಸೂರು ಮೌಲ್ವಿಗೆ ಮೂರು ಕೋಟಿ ಮೌಲ್ಯದ ಮನೆ ಹಾಗೂ ಹಣ ನೀಡಿರುವುದು ತನಿಖೆ ವೇಳೆ ಎಸ್ಐಟಿಗೆ ತಿಳಿದುಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆ ಆರೋಪಿ ಮಹಮ್ಮದ್ ಹನೀಫ್ನನ್ನು ಬಂಧಿಸಲಾಗಿತ್ತು.