ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡ ಠೇವಣಿದಾರರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಹಣ ಪಡೆದುಕೊಳ್ಳುವಂತೆ ಸಕ್ಷಮ ಪ್ರಾಧಿಕಾರ ಹಾಗೂ ಐಎಂಎ ಪ್ರಕರಣದ ವಿಶೇಷ ಅಧಿಕಾರಿ ಹರ್ಷ ಗುಪ್ತ ತಿಳಿಸಿದ್ದಾರೆ.
ಠೇವಣಿದಾರರ ಅರ್ಜಿ ಸ್ವೀಕಾರ ಪ್ರಕ್ರಿಯೆ ನವೆಂಬರ್ 25 ರಿಂದ ಆರಂಭವಾಗಲಿದ್ದು, ಡಿಸೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಬಗ್ಗೆ ಜಾಹೀರಾತು ಕೂಡ ನೀಡಲಾಗಿದೆ. ಠೇವಣಿದಾರರ ಮೊಬೈಲ್ ನಂಬರ್ ಪಡೆದಿದ್ದೇವೆ. ಅವರ ನಂಬರ್ಗೆ ಮೆಸೇಜ್ ಹಾಗೂ ಫ್ರೀ ರೆಕಾರ್ಡ್ ಕಾಲ್ ಹೋಗುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅವರ ವಿಳಾಸದ ಮಾಹಿತಿ ಕೂಡ ಕಳಿಸಲಾಗುವುದು ಎಂದು ಹರ್ಷಗುಪ್ತ ಮಾಹಿತಿ ನೀಡಿದ್ದಾರೆ.
ಐಎಂಎನಲ್ಲಿ 1 ಲಕ್ಷ ಜನ ಠೇವಣಿ ಇಟ್ಟಿದ್ದು, ಒಟ್ಟು 2,900 ಕೋಟಿ ರೂ. ವಂಚನೆ ನಡೆದಿದೆ. ಇದರಲ್ಲಿ 1,500 ಕೋಟಿ ರೂಪಾಯಿ ಹಣವನ್ನು ಗ್ರಾಹಕರು ವಾಪಸ್ ಪಡೆದಿದ್ದಾರೆ. ಇನ್ನೂ 1,400 ಕೋಟಿ ರೂ. ವಾಪಸ್ ಆಗಬೇಕಿದೆ. ಈ ಪೈಕಿ 475 ಕೋಟಿ ರೂ. ಆರೋಪಿಗಳ ಚರಾಸ್ತಿ ಹಾಗೂ ಸ್ಥಿರಾಸ್ತಿ ಜಪ್ತಿ ಮಾಡಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಹಣ ಕಳೆದುಕೊಂಡ ಗ್ರಾಹಕರು ನೇರವಾಗಿ imaclaims.Karnataka.gov.in ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು. ಅಥವಾ splocaima20@gmail.com ಗೆ ಈಮೇಲ್, 7975568880 ನಂಬರ್ಗೆ ವ್ಯಾಟ್ಸ್ಆ್ಯಪ್ ಮಾಡಬಹುದು. ಆನ್ಲೈನ್ ಅಥವಾ ಬೆಂಗಳೂರು ಒನ್ನಲ್ಲಿ ಬಂದು ಅರ್ಜಿ ಸಲ್ಲಿಸಬಹುದು. ಹೊರ ದೇಶದಲ್ಲಿದ್ದರೆ ನೇರವಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.