ಬೆಂಗಳೂರು: ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬರುವವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಕೆಲವರು ಅಕ್ರಮವಾಗಿ ನಗರವನ್ನು ನುಸುಳುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಲಾಕ್ಡೌನ್ನಿಂದ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಹಾಗೆ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಆದರೆ ಇದರಿಂದ ತಪ್ಪಿಸಿಕೊಳ್ಳಲು ಕೆಲವರು ಅಕ್ರಮವಾಗಿ ನಗರವನ್ನು ಪ್ರವೇಶಿಸುತ್ತಿದ್ದು, ಇಂದು ಆಂಧ್ರದಿಂದ ಅಕ್ರಮವಾಗಿ ಬಂದಿದ್ದವರನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಆಂಧ್ರದಿಂದ ನಗರಕ್ಕೆ ಬರುವ ಹಾಲಿನ ವಾಹನದಲ್ಲಿ ಇಬ್ಬರು ಯುವತಿಯರು ಬೆಂಗಳೂರಿಗೆ ಬಂದಿದ್ದರು. ಮಾಗಡಿ ಚೆಕ್ ಪೋಸ್ಟ್ ಬಳಿ ಬರುತ್ತಿದ್ದ ವೇಳೆ ಸ್ಥಳೀಯರು ವಾಹನ ತಡೆದು ವಿಚಾರಿಸಿದಾಗ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಅವರನ್ನು ಮಾಗಡಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ.
ಹಾಲಿನ ವಾಹನವನ್ನು ಪರಿಶೀಲನೆ ನಡೆಸುವುದಿಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡು ಜನರು ನಗರಕ್ಕೆ ಬರುತ್ತಿರುವ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.