ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಬಿಬಿಎಂಪಿ ಜತೆಗೆ ಬೆಂಗಳೂರು ನಗರ ಜಿಲ್ಲಾಡಳಿತವೂ ಕೈಜೋಡಿಸಿದ್ದು, ಜೆಸಿಬಿಗಳ ಗರ್ಜನೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
![ಸರ್ವೇ ನಂಬರ್ 55 ರಲ್ಲಿರುವ ಪ್ರದೇಶದ ಮ್ಯಾಪ್](https://etvbharatimages.akamaized.net/etvbharat/prod-images/kn-bng-02-illigal-encrochments-clearence-drive-district-administration-bbmp-going-hand-in-hand-7210969_15092022150647_1509f_1663234607_330.jpg)
ಇಂದಿಗೆ ತೆರವು ಕಾರ್ಯಾಚರಣೆಯ ನಾಲ್ಕನೇ ದಿನಕ್ಕೆ ತಲುಪಿದೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಕುದುರಗೆರೆ ಗ್ರಾಮದ ಸರ್ವೇ ನಂಬರ್ 55 ರಲ್ಲಿರುವ ಪ್ರದೇಶ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದ ಸುಮಾರು ಒಂದು ಎಕರೆ ಗೋಮಾಳ ಜಮೀನನ್ನು ವಶಕ್ಕೆ ಪಡೆಯಲಾಯಿತು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ನೇತೃತ್ವದಲ್ಲಿ ಬೆಂಗಳೂರು ಯಲಹಂಕ ತಹಶೀಲ್ದಾರ್ ರಾಮಲಕ್ಷ್ಮಯ್ಯ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ತೆರವುಗೊಳಿಸಿದರು. ಕನಕಪುರ ರಸ್ತೆಯ ಕೋಣನಕುಂಟೆ ವ್ಯಾಪ್ತಿಯಲ್ಲಿ ಶೆಡ್ಗಳನ್ನು ಬಿಬಿಎಂಪಿ ಅಧಿಕಾರಿಗಳು ಎರಡು ಜೆಸಿಬಿಗಳ ಮೂಲಕ ತೆರವು ಮಾಡಿದರು.
![ಸರ್ವೇ ನಂಬರ್ 55 ರಲ್ಲಿರುವ ಪ್ರದೇಶದ ಮ್ಯಾಪ್](https://etvbharatimages.akamaized.net/etvbharat/prod-images/kn-bng-02-illigal-encrochments-clearence-drive-district-administration-bbmp-going-hand-in-hand-7210969_15092022150647_1509f_1663234607_128.jpg)
ಒತ್ತುವರಿ ತೆರವು ಮಾಡುವಂತೆ ನೋಟಿಸ್: ಇಂದು ಒತ್ತುವರಿ ತೆರವು ಕಾರ್ಯಚರಣೆಗೆ ಬಿಬಿಎಂಪಿ, ಕಂದಾಯ ಇಲಾಖೆ ಇಂದು ಮಧ್ಯಾಹ್ನದ ನಂತರ ಕೊಂಚ ವಿರಾಮ ನೀಡಿವೆ. ಸತತವಾಗಿ ಮೂರು ದಿನ ಒತ್ತುವರಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ, ಇಂದು ಒತ್ತುವರಿ ಮಾಡಿರುವ ರಾಜಕಾಲುವೆ, ಕೆರೆಗಳ ಸರ್ವೇ ಕಾರ್ಯ ಮಾಡುತ್ತಿದೆ. ಸರ್ವೇ ನಂತರ ಮೊದಲು ನೋಟಿಸ್ ನೀಡಲಿರುವ ಕಂದಾಯ ಇಲಾಖೆ, ಏಳು ದಿನಗಳ ಒಳಗೆ ಒತ್ತುವರಿದಾರರಿಗೆ ಒತ್ತುವರಿ ತೆರವು ಮಾಡುವಂತೆ ನೋಟಿಸ್ನಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಏಳು ದಿನಗಳಲ್ಲಿ ಒತ್ತುವರಿದಾರರು ತೆರವು ಮಾಡದಿದ್ದರೆ ಕಂದಾಯ ಇಲಾಖೆಯಿಂದ ತೆರವು ಮಾಡಲಾಗುವುದು. ಈಗಾಗಲೇ ನೂರಕ್ಕೂ ಹೆಚ್ಚು ಒತ್ತುವರಿ ಕಟ್ಟಡ ಗುರುತು ಮಾಡಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳು ಜಮೀನು ಮಾಲೀಕರ ನಡುವೆ ವಾಗ್ವಾದ: ಯಮಲೂರಿನ ಎಪ್ಸಿಲಾನ್ ಬಳಿ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಜಮೀನು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು. ಜಮೀನು ಮಾಲೀಕ ರಘುರಾಮ್ ರೆಡ್ಡಿ ನಾವೆಲ್ಲರೂ ಎಪ್ಸಿಲಾನ್ ವಿಲ್ಲಾಗಳಿಗೆ ಜಮೀನು ಬಿಟ್ಟು ಕೊಟ್ಟಿದ್ದೇವೆ. ಏನೇ ತಂಟೆ ತಕರಾರು ಬಂದರೂ ಅದನ್ನ ಜಮೀನು ಮಾಲೀಕರಾದ ನಾವೇ ಬಗೆಹರಿಸಿಕೊಡಬೇಕು. ಇರುವ ರಾಜಕಾಲುವೆ ಬಿಟ್ಟು ಬೇರೆ ಕಡೆ ಗುರುತು ಮಾಡಿದ್ದಾರೆ. ಶತಮಾನಗಳಿಂದ ರಾಜಕಾಲುವೆ ಇರುವುದು ಇಲ್ಲೇ ಎಂದರು.
ಕಾಂಪೌಂಡ್ ಒಡೆಯಲು ಗುರುತು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನಾವು ಕಾಂಪೌಂಡ್ ಒಡೆಯಲು ಬಿಡುವುದಿಲ್ಲ. ಯಾವ ಆಧಾರದ ಮೇಲೆ ಸರ್ವೇ ಮಾಡಿದ್ದಾರೆ ಎಂದೂ ಗೊತ್ತಿಲ್ಲ ಎಂದು ಕಿಡಿಕಾರಿದರು.
ಪ್ರಭಾವಿಗಳ ಅತಿಕ್ರಮಣ: ಬೆಂಗಳೂರು ನಗರದ 696 ಸ್ಥಳಗಳಲ್ಲಿ ಪ್ರಭಾವಿಗಳ ಕಟ್ಟಡಗಳಿಂದ ರಾಜಕಾಲುವೆಗಳು ಅತಿಕ್ರಮಣಗೊಂಡಿವೆ ಎಂದು ಹೇಳಲಾಗಿದೆ. 2016ರಲ್ಲೇ ರಾಜಕಾಲುವೆ ಒತ್ತುವರಿ ಮಾಡಿದ ಬಗ್ಗೆ ಪಟ್ಟಿ ಸಿದ್ಧಪಡಿಸಿದ್ದ ಬಿಬಿಎಂಪಿ 2,515 ಒತ್ತುವರಿ ಪ್ರದೇಶಗಳನ್ನು ಗುರುತು ಮಾಡಿತ್ತು. ಈ ಪೈಕಿ ಈಗ 428 ಸ್ಥಳಗಳಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ.
ಆದರೆ, 696 ಸ್ಥಳಗಳಲ್ಲಿ ಉಳಿದೆಡೆ ಪ್ರಭಾವಿಗಳ ಮನೆಗಳು, ಕಟ್ಟಡಗಳು, ಆಸ್ಪತ್ರೆಗಳು ಮತ್ತು ವಾಣಿಜ್ಯ ಮಳಿಗೆಗಳು ಇರುವ ಕಾರಣ ತೆರವು ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಲಾಗಿದೆ. ಇದೀಗ ಮತ್ತೊಮ್ಮೆ ಹೊಸದಾಗಿ ಸರ್ವೇ ಪ್ರಕ್ರಿಯೆ ಆರಂಭಿಸಲು ಸರ್ಕಾರ ಮುಂದಾಗಿದೆ.
ತೆರವು ಕಾರ್ಯಾಚರಣೆ ಬಾಕಿ: ಬೆಂಗಳೂರು ಪೂರ್ವ ವಲಯದಲ್ಲಿ 110, ಪಶ್ಚಿಮ ವಲಯದಲ್ಲಿ 59, ದಕ್ಷಿಣ ವಲಯದಲ್ಲಿ 20, ಕೆ-100 ವ್ಯಾಲಿಯಲ್ಲಿ 3 ಒತ್ತುವರಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ತೆರವು ಕಾರ್ಯಾಚರಣೆ ಬಾಕಿಯಿದೆ. ಯಲಹಂಕ ವಲಯದಲ್ಲಿ 96, ಮಹದೇವಪುರ ವಲಯದಲ್ಲಿ 136, ಮಹದೇವಪುರದಲ್ಲಿ 45, ಬೊಮ್ಮನಹಳ್ಳಿ 26, ಬೊಮ್ಮನಹಳ್ಳಿ ನ್ಯೂ 66, ಆರ್ಆರ್ ನಗರ 9, ದಾಸರಹಳ್ಳಿಯಲ್ಲಿ 126 ಕಟ್ಟಡಗಳ ತೆರವು ಬಾಕಿಯಿದೆ. ಬಹುತೇಕ ಸ್ಥಳಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸೇರಿದ ಪ್ರಭಾವಿಗಳ ಆಸ್ತಿಗಳಿವೆ.
ಓದಿ: ಪಿಎಸ್ಐ ಪ್ರಕರಣ: ಆಸ್ತಿ ಮುಟ್ಟುಗೋಲಿಗೆ ಹೆದರಿ ಕೋರ್ಟ್ ಮುಂದೆ ಶರಣಾದ ಆರೋಪಿ