ಬೆಂಗಳೂರು : ಲಾಕ್ ಡೌನ್ ವೇಳೆ ದಂಧೆಗಿಳಿದಿದ್ದ ಮದ್ಯ ಮಾರಾಟಗಾರರ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಎರಡು ಪ್ರತ್ಯೇಕ ಪೊಲೀಸ್ ಠಾಣಾ ವ್ಯಾಪ್ತಿಗಳಾದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಮತ್ತು ಬೇಗೂರು ಠಾಣೆಗಳಿಂದ ಒಟ್ಟು 27 ಲಕ್ಷದ 57 ಸಾವಿರ ಬೆಲೆಬಾಳುವ ಮದ್ಯ ಹಾಗೂ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 89,630 ಸಾವಿರ ಬೆಲೆ ಬಾಳುವ 198 ಲೀಟರ್ ಮದ್ಯವನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಕಾರ್ಯಾಚರಣೆ ವೇಳೆ ವಾಹನ ಚಾಲಕ ವೇಲು ಎಂಬಾತನನ್ನ ಬಂಧಿಸಿದ್ದಾರೆ.
ಆರೋಪಿಗಳು ದೊಡ್ಡತೊಗನಗುರಿ ಎಸ್ಎಲ್ಆರ್ಬಾರ್ನಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು. ಲಾಕ್ ಡೌನ್ನಲ್ಲಿ ಹೆಚ್ಚಿನ ಹಣಕ್ಕಾಗಿ ಮದ್ಯವನ್ನ ಶೇಖರಿಸಿ, ಬ್ಲಾಕ್‌ನಲ್ಲಿ ಮಾರಾಟ ಮಾಡಲು ಆರೋಪಿಗಳು ಪ್ಲಾನ್ ಮಾಡಿದ್ದರೆನ್ನಲಾಗಿದೆ. ಈ ವೇಳೆ ಇನ್ಸ್ಪೆಕ್ಟರ್ ಅನಿಲ್ ನೇತೃತ್ವದಲ್ಲಿ 198 ಲೀ. ಉಳ್ಳ 23 ಮದ್ಯದ ಬಾಕ್ಸ್‌ಗಳ ವಾಹನ ಹಾಗೂ ಸಂಬಂಧಪಟ್ಟ ಮೊಬೈಲ್‌ಗಳನ್ನ ವಶಕ್ಕೆ ಪಡೆದಿದ್ದಾರೆ.
ಬೇಗೂರಿನ ಪೊಲೀಸರಿಂದ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಶಿವಪ್ರಸಾದ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 1ಲಕ್ಷ 20 ಸಾವಿರ ಬೆಲೆ ಬಾಳುವ 200 ಲೀಟರ್ ಮದ್ಯ, ಸಾಗಾಟಕ್ಕೆ ಬಳಸಿದ ಕಂಟೈನರ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಕುಮಾರ್, ಬಾಲಾಜಿ, ಜಗನ್, ಸುಂದರ್ ಮೂರ್ತಿ ಹಾಗೂ ರಾಜೇಶ್ ಎಂಬುವವರನ್ನು ಬಂಧಿಸಲಾಗಿದೆ.