ಬೆಂಗಳೂರು : ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಗ್ರಿಲ್ ಉರುಳಿಬಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಐಐಎಸ್‌ಸಿ ತಂಡ ಮೆಟ್ರೋ ಸಂಸ್ಥೆಗೆ ವರದಿ ಸಲ್ಲಿಸಿದೆ. ಘಟನೆಗೆ ಕಾರಣ ಏನು ಎಂಬುದನ್ನಷ್ಟೇ ಐಐಎಸ್‌ಸಿ ತಂಡ ತಿಳಿಸಿದೆ. ಚೌಕಟ್ಟಿಗೆ ಆಸರೆಯಾಗಿ ಕಟ್ಟಲಾಗಿದ್ದ ಕಬ್ಬಿಣದ ಹಗ್ಗಗಳನ್ನು ತೆರವುಗೊಳಿಸಿದ ಬಳಿಕ ಒಂದು ದಿನ ಪೂರ್ತಿ ಅಸುರಕ್ಷಿತ ಸ್ಥಿತಿಯಲ್ಲಿ ಇತ್ತು ಎಂದು ಹೇಳಿದೆ. ಮೆಟ್ರೋ ಪಿಲ್ಲರ್ ಕುಸಿದ ಘಟನೆಯಲ್ಲಿ ತಾಯಿ ಮತ್ತು ಮಗು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಐ.ಐ.ಎಸ್.ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಜೆ.ಎಂ. ಚಂದ್ರಕಿಶನ್ ನೇತೃತ್ವದ ತಂಡ 27 ಪುಟಗಳ ವರದಿ ಸಿದ್ಧಪಡಿಸಿ ಇ-ಮೇಲ್ ಮೂಲಕ ವರದಿಯನ್ನು ಬಿಎಂಆರ್‌ಸಿಎಲ್‌ಗೆ ಸಲ್ಲಿಸಿದೆ. 18 ಮೀಟರ್ ಎತ್ತರದ ಕಂಬಕ್ಕೆ ಯಾವುದೇ ಆಸರೆ ಇಲ್ಲದಿದ್ದರಿಂದ ರಸ್ತೆಗೆ ವಾಲಿದೆ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ. ಅನಾಹುತಕ್ಕೆ ಇದೇ ಕಾರಣ ಎಂದು ವರದಿಯಲ್ಲಿ ವಿವರಿಸಿದೆ.
ವೃತ್ತಾಕಾರದ ಕಬ್ಬಿಣದ ಪ್ಲೇಟ್‌ಗಳನ್ನು ಜೋಡಿಸಬೇಕಿತ್ತು: ಈ ರೀತಿಯ ಕಂಬ ನಿರ್ಮಾಣ ಮಾಡುವಾಗ ಆಸರೆಗಾಗಿ ಕಬ್ಬಿಣದ ತಂತಿಗಳಿಂದ ಬಿಗಿಯಲಾಗುತ್ತದೆ. ಅದನ್ನು ತೆರವುಗೊಳಿಸಿದ ತಕ್ಷಣ ವೃತ್ತಾಕಾರದ ಕಬ್ಬಿಣದ ಪ್ಲೇಟ್‌ಗಳನ್ನು ಜೋಡಿಸಬೇಕು. ಅಲ್ಲಿಯ ತನಕ ಸುರಕ್ಷತೆ ದೃಷ್ಟಿಯಿಂದ ಕ್ರೇನ್‌ನಿಂದ ಆಸರೆ ನೀಡಬೇಕಿತ್ತು. ಈಗ ಬಿದ್ದಿರುವ ಚೌಕಟ್ಟಿಗೆ ಈ ರೀತಿಯ ಯಾವುದೇ ಆಸರೆ ಇರಲಿಲ್ಲ. ಈ ರೀತಿಯ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಮಿಕರಿಗೆ ತಿಳಿವಳಿಕೆ ನೀಡಬೇಕು. ಹೊಸದಾಗಿ ಬರುವ ಕಾರ್ಮಿಕರಿಗೆ ತರಬೇತಿ ನೀಡಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಹಿನ್ನೆಲೆ : ಕಳೆದ ಜನವರಿ 10 ರಂದು ನಗರದ ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಬೆಳಗ್ಗೆ ಬೈಕ್ನಲ್ಲಿ ತೆರಳುತ್ತಿದ್ದವರ ಮೇಲೆ ಉರುಳಿಬಿದ್ದಿತ್ತು. ಈ ಸಂದರ್ಭ ಬೈಕ್‌ನಲ್ಲಿದ್ದ ತೇಜಸ್ವಿನಿ ಸುಲಾಖೆ (28) ಹಾಗೂ 2.5 ವರ್ಷದ ಮಗು ವಿಹಾನ್ ಮೃತಪಟ್ಟಿದ್ದರು. ಘಟನೆಯಲ್ಲಿ ತಂದೆ ಮಗಳು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಹೊರಮಾವು ಡಿಮ್ಯಾಕ್ಸ್ ಅಪಾರ್ಟ್ ಮೆಂಟ್ ನಿವಾಸಿಯಾಗಿದ್ದ ಗದಗ ಮೂಲದ ತೇಜಸ್ವಿನಿ (28) ಮತ್ತು ವಿಹಾನ್(2.5) ಘಟನೆಯಲ್ಲಿ ಮೃತಪಟ್ಟಿದ್ದರು. ಗದಗ ಮೂಲದ ಲೋಹಿತ್ ಸಿವಿಲ್ ಇಂಜಿನಿಯರ್ ಆಗಿ ಬೆಂಗಳೂರಿನನಲ್ಲಿ ದುಡಿಯುತ್ತಿದ್ದರು. ತೇಜಸ್ವಿನಿ ಮತ್ತು ಲೋಹಿತ್ ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕನಲ್ಲಿ ಉದ್ಯೋಗಿಗಳಾಗಿದ್ದರು. ಅಂದು ಮಕ್ಕಳನ್ನು ಶಿಶು ವಿಹಾರಕ್ಕೆ ಬಿಡಲು ಹೋಗುತ್ತಿದ್ದಾಗ ಬೈಕ್ ಮೇಲೆ ಮೆಟ್ರೋ ಪಿಲ್ಲರ್ಗೆ ಅಳವಡಿಸಿದ್ದ ಗ್ರಿಲ್ ಅವರ ಮೇಲೆ ಬಿದ್ದಿತ್ತು.
ಎಂಟು ಜನರ ಮೇಲೆ ಎಫ್ಐಆರ್ : ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ ಸಂಬಂಧ 8 ಜನರ ಮೇಲೆ ಎಫ್ಐಆರ್ ದಾಖಲಾಗಿತ್ತು. ನಾಗಾರ್ಜುನ ಕನ್ಸ್‌ಟ್ರಕ್ಷನ್ ಕಂಪನಿಯ ಪೂಜಾ ಜೆಇ, ಚೈತನ್ಯ, ಮೆಥಾಯಿ ಕಂಪನಿಯ ವಿಕಾಸ್ ಸಿಂಗ್ ಪಿಎಂ, ಸೂಪರ್ ವೈಸರ್ ಲಕ್ಷ್ಮಿ ಪತಿ, ಬಿಎಂಆರ್ಸಿಎಲ್ ಇಂಜಿನಿಯರ್ ವೆಂಕಟೇಶ್ ಶೆಟ್ಟಿ, ಬಿಎಂಆರ್ಸಿಎಲ್ ಇಂಜಿನಿಯರ್ ಮಹೇಶ್ ಬೆಂಡೆಕೇರಿ ಮೇಲೆ ದೂರು ದಾಖಲಾಗಿತ್ತು.
ಇದನ್ನೂ ಓದಿ :ಮೆಟ್ರೋ ಪಿಲ್ಲರ್ ದುರಂತ: ಮೂವರು ಇಂಜಿನಿಯರ್ಗಳು ಸಸ್ಪೆಂಡ್.. ತನಿಖೆ ನಡೆಸಿ ವರದಿ ನೀಡಲು ಐಐಎಸ್ಸಿಗೆ ಮನವಿ