ಬೆಂಗಳೂರು: ಕೊರೊನಾ ವೈರಸ್ ಆತಂಕದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕ್ಯಾಂಪಸ್‌ನಲ್ಲಿ ನಡೆದಿದೆ. ಈ ಘಟನೆಯನ್ನು ಪೊಲೀಸರು ಖಚಿತಪಡಿಸಿದ್ದಾರೆ.
'ತನ್ನ ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಹಾಕಿಕೊಂಡು ಸಂದೀಪ್ ಕುಮಾರ್ ಸಾವಿಗೆ ಶರಣಾಗಿದ್ದಾನೆ. ತನಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆಯಿಂದ ಮಾನಸಿಕ ಖಿನ್ನತೆಗೊಳಗಾದ ಆತ ಈ ನಿರ್ಧಾರ ತೆಗೆದುಕೊಂಡಿದ್ದಾನೆ' ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಧಿಕಾರಿಯ ಪ್ರಕಾರ, 'ಛತ್ತೀಸ್‌ಗಢ ಮೂಲದ ಎಂ.ಟೆಕ್ ವಿದ್ಯಾರ್ಥಿ ಕೆಲವು ಸ್ನೇಹಿತರಿಗೆ ತನ್ನ ಸ್ಥಿತಿಗತಿಯ ಬಗ್ಗೆ ಮೊಬೈಲ್ ಮೆಸೇಜ್‌ಗಳನ್ನು ಕಳುಹಿಸಿದ್ದನಂತೆ'.
ವಿದ್ಯಾರ್ಥಿಯ ಆತ್ಮಹತ್ಯೆಗೆ IISc ಸಂತಾಪ ಸೂಚಿಸಿದೆ. ಸಂಸ್ಥೆಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವು ಗಂಭೀರ ವಿಚಾರವಾಗಿದೆ. ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸಂಸ್ಥೆ ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆಗಳನ್ನು ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪ್ಯೂಟೇಶನಲ್ ಮತ್ತು ಡೇಟಾ ಸೈನ್ಸಸ್ ವಿಭಾಗದಲ್ಲಿ ಎಂ.ಟೆಕ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಕಳೆದುಕೊಂಡ ಕುಟುಂಬಸ್ಥರು, ಗೆಳೆಯರಿಗೆ ಈ ದು:ಖವನ್ನು ಭರಿಸುವ ಶಕ್ತಿಯಿರಲಿ ಎಂದು IISc ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ ಕೊರೊನಾ ವಿವರ:
ರಾಜ್ಯದಲ್ಲಿ ಸದ್ಯ 2.33 ಲಕ್ಷ ಪಾಸಿಟಿವ್ ಪ್ರಕರಣಗಳಿವೆ. ಇಲ್ಲಿಯವರೆಗೆ 4,062 ಮಂದಿ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಮೂವರು ಕೋವಿಡೇತರ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.