ಬೆಂಗಳೂರು: ದೇಶವನ್ನು ಮುನ್ನಡೆಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ನಮ್ಮಂಥ ಯುವಕರು ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಬೆಂಗಳೂರು ಸೆಂಟ್ರಲ್ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಅಗತ್ಯ ವಸ್ತುಗಳ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಲಪಾಡ್, ವಿಶ್ವದಲ್ಲಿಯೇ ಕಚ್ಚಾತೈಲದ ಬೆಲೆ ಅತ್ಯಂತ ಕಡಿಮೆಯಾಗಿದೆ. ಇಂಥ ಸಂದರ್ಭದಲ್ಲಿ ಭಾರತದಲ್ಲಿ ಮಾತ್ರ ಇಂಧನ ಬೆಲೆ ಹೆಚ್ಚಳ ಆಗುತ್ತೆ ಎಂದರೆ ಇದಕ್ಕೆ ಏನು ಅನ್ನೋಣ. ನಿಮ್ಮಿಂದ ಸರ್ಕಾರ ನಡೆಸಲು ಸಾಧ್ಯವಾಗದೇ ಹೋದರೆ, ನಾವು ಈ ದೇಶವನ್ನು ಮುನ್ನಡೆಸುತ್ತೇವೆ ಎಂದಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಭಾಷಣದ ಮೂಲಕ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಕಚ್ಚಾತೈಲದ ಬೆಲೆ 20 ಡಾಲರ್ಗೆ ಇಳಿಕೆ ಕಂಡರೂ ಬೆಲೆ ಇಳಿಸುವ ಕಾರ್ಯ ಮಾಡುವ ಬದಲು, ಬೆಲೆ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ. ಈ ಮೂಲಕ ಬಡವರ ಮೇಲೆ ಇನ್ನೊಂದು ಹೊರೆ ಹೊರಿಸಿದ್ದಾರೆ. ರಾಜ್ಯದ ಜನರಿಗೋಸ್ಕರ ನಾವು ಈ ಶಾಂತಿಯುತ ಹೋರಾಟವನ್ನು ನಡೆಸುತ್ತಿದ್ದೇವೆ. ಪ್ರಧಾನಿ ಕೂಡಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಹಿಂಪಡೆಯಬೇಕು, ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.