ಬೆಂಗಳೂರು: ಮುಂದಿನ ಬಾರಿಯ ಚುನಾವಣೆಯಲ್ಲಿ ನಮಗೆ ರಾಜ್ಯದ ಜನ ಅಧಿಕಾರ ಕೊಟ್ಟರೆ ಬಡವರಿಗೆ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ವಿಜಯನಗರ ವಿಧಾನಸಭೆ ಕ್ಷೇತ್ರದ ಕೆ.ಪಿ.ಅಗ್ರಹಾರದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಕನಕದಾಸರ ಜಯಂತಿಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ಅಲ್ಲಿ ಮಾತನಾಡಿದ ಅವರು, ನಾವು ನಿಮಗೆ ಅಕ್ಕಿ ಕೊಡಲು ಬದ್ಧವಾಗಿದ್ದೇವೆ. ನೀವು ಕಾಂಗ್ರೆಸ್ಗೆ ಮತ ಹಾಕಿದರೆ, ನನಗೆ ಮತ ನೀಡಿದಂತೆ ಎಂದರು.
ನಾವು ಅಧಿಕಾರದಲ್ಲಿ ಇದ್ದಿದ್ದರೆ ಬಡವರಿಗೆ ಮನೆ ನೀಡುತ್ತಿದ್ದೆವು. 1 ಲಕ್ಷ ಮನೆಗಳನ್ನು ಬಡವರಿಗಾಗಿ ಕೊಡುತ್ತಿದ್ದೆವು. ಆದ್ರೆ ಆ ಪುಣ್ಯಾತ್ಮ ವಸತಿ ಸಚಿವ ಒಂದು ಮನೆಯನ್ನೂ ನೀಡಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಬಗ್ಗೆ ಸಿದ್ದರಾಮಯ್ಯ ಬೇಸರದ ಮಾತುಗಳನ್ನಾಡಿದರು.
ಮುಂದಿನ ಸಿಎಂ ಸಿದ್ದರಾಮಯ್ಯ: ಈ ಸಮಾರಂಭದಲ್ಲಿ ಮತ್ತೊಮ್ಮೆ ಮುಂದಿನ ಸಿಎಂ ಸಿದ್ದರಾಮಯ್ಯ ಘೋಷಣೆ ಕೇಳಿಬಂತು. ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಭಾಗದಲ್ಲಿ ವಾಸವಾಗಿರುವವರು ಎಲ್ಲರೂ ಬೇರೆ ಭಾಗದಿಂದ ಆಗಮಿಸಿ ವಾಸವಾಗಿರುವವರು. ಕೊಳ್ಳೆಗಾಲ, ಚಾಮರಾಜನಗರ, ಮಳವಳ್ಳಿ, ಮೈಸೂರು ಮತ್ತಿತರ ಭಾಗದವರೇ ಬಂದು ಕೆಲಸ ಮಾಡುತ್ತಿದ್ದೀರಿ. ಉದ್ಯೋಗ ಹುಡುಕಿಕೊಂಡು ಬಂದಿರುವ ಹೆಚ್ಚು ಜನ ಇಲ್ಲಿ ನೆಲೆಸಿದ್ದಾರೆ. ನಾನು ಬಂದಾಗೆಲ್ಲಾ ಪ್ರೀತಿ ಅಭಿಮಾನದಿಂದ ಕಾಣುತ್ತೀರಿ. ನಿಮಗೆಲ್ಲಾ ನಾನು ಚಿರರುಣಿ ಎಂದರು.
ನಾವೆಲ್ಲಾ ಮನುಷ್ಯರು. ಆಕಸ್ಮಿಕವಾಗಿ ಎಲ್ಲರೂ ಒಂದೊಂದು ಜಾತಿಯಲ್ಲಿ ಹುಟ್ಟಿರುತ್ತೇವೆ. ಕೃಷ್ಣಪ್ಪ ಇಲ್ಲೇ ಹುಟ್ಟಿದವರು. ಹಳೆಯ ಹುಲಿ. ಮುಂದಿನ ಚುನಾವಣೆಯಲ್ಲಿ ಇವರ ಪುತ್ರ ಪ್ರಿಯಕೃಷ್ಣರನ್ನು ಗೆಲ್ಲಿಸಬೇಕು, ಗೆಲ್ಲುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಮನಗರ: ಚುಂಚಿ ಫಾಲ್ಸ್ ಪ್ರವಾಸಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು
ಇದೇ ಸಂದರ್ಭ ಸ್ಥಳೀಯ ನಾಯಕ ಶಶಿಕುಮಾರ್ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು. ಸಿದ್ದರಾಮಯ್ಯ ವೇದಿಕೆ ಮೇಲೆ ಇದ್ದ ಸಂದರ್ಭದಲ್ಲೇ ಮೂರು ಸಾರಿ ಘೋಷಣೆ ಕೂಗಿದರು. ಇದನ್ನು ಕೇಳಿಸಿಕೊಂಡರೂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಇದೇ ವೇಳೆ ಕನಕದಾಸರು, ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಡಾ. ರಾಜಕುಮಾರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕ್ಷೇತ್ರದ ಶಾಸಕರಾದ ಕೃಷ್ಣಪ್ಪ, ಮಾಜಿ ಶಾಸಕ ಪ್ರಿಯಕೃಷ್ಣ ಹಾಜರಿದ್ದರು.