ಬೆಂಗಳೂರು : ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ನೀಡಲಾದ ಜಮೀನನ್ನು ಒಂದು ವೇಳೆ ದುರುಪಯೋಗಪಡಿಸಿಕೊಂಡ್ರೆ ಅಥವಾ ಅಕ್ರಮವೆಸಗಿದ್ರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಪ್ರಶ್ನೆಗೆ ಸಚಿವ ಪೂಜಾರಿ ಉತ್ತರಿಸಿದರು. ಭೂ ಒಡೆತನ ಯೋಜನೆ ಅಡಿ ಕಳೆದ ವರ್ಷಗಳಲ್ಲಿ ಸುಮಾರು 41,590 ಫಲಾನುಭವಿಗಳಿಗೆ 68 ಸಾವಿರ ಎಕರೆ ಭೂಮಿ ನೀಡಲಾಗಿದೆ. ಇದಕ್ಕಾಗಿ 5 ವರ್ಷಗಳಲ್ಲಿ 436 ಕೋಟಿ ಹಣ ಖರ್ಚು ಮಾಡಲಾಗಿದೆ. ಭೂಮಿ ನೀಡಿರುವುದರಲ್ಲಿ ಅಕ್ರಮ ಆಗಿರುವ ಬಗ್ಗೆ ತನಿಖೆ ಮಾಡಿಸುತ್ತೇವೆ.
ಇದನ್ನೂ ಓದಿ: ಐಷಾರಾಮಿ ಕಾರುಗಳ ತೆರಿಗೆ ವಂಚನೆ ಕೇಸ್ ಸಿಐಡಿ ತನಿಖೆಗೆ : ಸಚಿವ ಶ್ರೀರಾಮುಲು
ಅಕ್ರಮ ಮಾಡಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಕೇಸ್ ಹಾಕುತ್ತೇವೆ. ಭೂ ಒಡೆತನ ಯೋಜನೆ ಅಡಿ ಭೂಮಿ ನೀಡಲು ವಿಶೇಷ ಮಾರ್ಗಸೂಚಿಗೆ ಸಿದ್ಧತೆ ಮಾಡುತ್ತೇವೆ. ಅಕ್ರಮ ಮಾಡಿರೋರಿಗೆ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಪರಿಣಾಮಕಾರಿ ಅನುಷ್ಠಾನ : ಕಳೆದ 3 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಗಳ ಮೇಲೆ ದೌರ್ಜನ್ಯವೆಸಗಿದ 23,095 ಪ್ರಕರಣ ದಾಖಲಾಗಿವೆ. ಇದರಲ್ಲಿ 254 ಕೇಸ್ಗಳಲ್ಲಿ ಆರೋಪ ಸಾಬೀತಾಗಿದೆ. ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ದೌರ್ಜನ್ಯ ತಡೆ ಕಾಯ್ದೆ ಪರಿಣಾಮವಾಗಿ ಅನುಷ್ಠಾನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಸ್ಗಳ ಶೀಘ್ರ ವಿಲೇವಾರಿಗೆ ವಿಶೇಷ ಅಭಿಯೋಜಕರನ್ನ ನೇಮಕ ಮಾಡಲಾಗಿದೆ. ಶಿಕ್ಷೆ ಆಗುವ ರೀತಿ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ 99 ಜನರಿಗೆ ಪರಿಹಾರ ಕೊಡುವ ಕೆಲಸ ಮಾಡಲಾಗಿದೆ.128 ಜನರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ ಎಂದು ಹೇಳಿದರು.