ಬೆಂಗಳೂರು: ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದಿದ್ದರೆ, ತಮ್ಮ ನಡೆ ಮನೆ ಕಡೆಗೆ ಎಂದು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದ್ರೆ ಯಾರು ತಪ್ಪಿಸಿದ್ದಾರೊ ಗೊತ್ತಿಲ್ಲ. ಈ ಬಗ್ಗೆ ನಮ್ಮ ನಾಯಕರೊಂದಿಗೆ ಮಾತಾಡಿದ್ದೇನೆ. ಆಂತರಿಕ ವಿಚಾರ ಬಹಿರಂಗ ಪಡಿಸೋಕಾಗಲ್ಲ. ಇವತ್ತು ಏನೇನೋ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದು, ನಾನು ಯಡಿಯೂರಪ್ಪರನ್ನ ಬಿಟ್ಟರೆ ಬೇರೆ ಯಾರನ್ನೂ ಭೇಟಿ ಮಾಡಿಲ್ಲ. ಇದೆಲ್ಲವೂ ಊಹಾಪೋಹ ಎಂದು ಕತ್ತಿ ಸ್ಪಷ್ಟಪಡಿಸಿದರು. ನನಗೆ ಯಾವ ಅತೃಪ್ತಿಯೂ ಇಲ್ಲ, ಅಸಮಾಧಾನವೂ ಇಲ್ಲ. ಅಸಮಾಧಾನ ಇತ್ತು. ಅದನ್ನ ಸಿಎಂ ಬಳಿ ತಿಳಿಸಿದ್ದು, ಅವರು ನನಗೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಎಂದರು.
ಇದಕ್ಕೂ ಮುನ್ನ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರ ಜೊತೆ ಉಮೇಶ್ ಕತ್ತಿ ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಸಭೆ ನಡೆಸಿದ್ರು. ಸಭೆಯಲ್ಲಿ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಮಹಾದೇವಪ್ಪ ಯಾದವಾಡ ಸೇರಿದಂತೆ ಮೊದಲಾದವರು ಈ ಸಭೆಯಲ್ಲಿ ಭಾಗಿಯಾಗಿದ್ರು ಎನ್ನಲಾಗ್ತಿದೆ.
ಇನ್ನು ಶಾಸಕರ ಭವನದಲ್ಲಿ ಉಮೇಶ್ ಕತ್ತಿ ಜೊತೆ ಮಾತುಕತೆ ಬಳಿಕ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ನಾವೆಲ್ಲಾ ಹಿಂದೆ ಒಂದೇ ಪಕ್ಷದಲ್ಲಿ ಇದ್ದವರು. ಮುಂದೆ ರಾಜಕೀಯ ಹೇಗೆ ಆಗುತ್ತದೋ ಗೊತ್ತಿಲ್ಲ. ಹಿಂದೆ ಒಟ್ಟಿಗೆ ಇದ್ದವರು, ಮುಂದೆ ಒಟ್ಟಾಗಲೂಬಹುದು. ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆ ಎಂದು ತಿಳಿದುಕೊಳ್ಳಬೇಡಿ. ಮರಳಿ ಮನೆಗೆ ಬನ್ನಿ ಅಂತಾ ಕತ್ತಿ ಅವರಿಗೆ ಬಹಳ ದಿನಗಳಿಂದ ಹೇಳುತ್ತಿದ್ದು, ಈಗಲೂ ಅದನ್ನೇ ಹೇಳಿದ್ದೇನೆ. ಕೆಲವು ಸಮಸ್ಯೆಗಳಿವೆ, ಅವನ್ನು ಸರಿಪಡಿಸಿಕೊಂಡು ಬರುತ್ತೇನೆ ಅಂತಾ ಕತ್ತಿ ತಿಳಿಸಿದ್ದಾರೆ ಎಂದರು.
ಮತ್ತೊಂದೆಡೆ ಶಾಸಕರ ಭವನದಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ನನ್ನ ಕಡೆಯ ಉಸಿರು ಇರುವವರೆಗೂ ಕುಮಾರಸ್ವಾಮಿಯನ್ನು ರಾಜಕೀಯವಾಗಿ ಭೇಟಿ ಮಾಡುವ ಪ್ರಶ್ನೆಯೇ ಇಲ್ಲ. ಇದನ್ನು ಬೂಟಾಟಿಕೆಗೆ ಹೇಳುತ್ತಿಲ್ಲ, ಯಡಿಯೂರಪ್ಪ ರಾಜಕೀಯದಲ್ಲಿ ಇರುವವರೆಗೂ ಅವರ ಮನೆಯ ಮಗನಾಗಿ ಇರುತ್ತೇನೆ. ಅವರಿಗೆ ಮತ್ತು ಪಕ್ಷಕ್ಕೆ ದ್ರೋಹ ಮಾಡುವ ಪ್ರಶ್ನೆಯೇ ಇಲ್ಲವೆಂದು ಅಸಮಾಧಾನಿತ ಶಾಸಕರು ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದ್ರು.