ಬೆಂಗಳೂರು: ಹೋಂ ಕ್ವಾರಂಟೈನ್ ಅನುಸರಿಸುವಂತೆ ಕೈ ಮೇಲೆ ಸ್ಟಾಂಪ್ ಹಾಕಿದ್ದರೂ ಕೆಲ ತಿಳಿಗೇಡಿಗಳು ನಿಯಮ ಪಾಲಿಸದೆ ಎಲ್ಲೆಂದರಲ್ಲಿ ಸುತ್ತಾಡಿ ಬೇಜವಾಬ್ದಾರಿ ಮೆರೆಯುತ್ತಿರುವುದು ಬೆಳಕಿಗೆ ಬಂದಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ನಗರದಲ್ಲಿ 5000 ಮಂದಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಕೈ ಮೇಲೆ ಸ್ಟಾಂಪ್ ಹಾಕಲಾಗಿದೆ. ಆದರೆ, ಸ್ಟ್ಯಾಂಪ್ ಹಾಕಿಸಿಕೊಂಡಿರುವ ವ್ಯಕ್ತಿಗಳು ಮುಲಾಜಿಲ್ಲದೆ ಬಿಎಂಟಿಸಿ, ಕೆಎಸ್ಆರ್ಟಿಸಿ, ಹೋಟೆಲ್ಗಳಲ್ಲಿ ಓಡಾಡುತ್ತಿದ್ದಾರೆಂದು ತಮಗೆ ಕರೆಗಳು ಬರುತ್ತವೆ ಎಂದು ಸ್ವತಃ ನಗರ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಇನ್ನೂ ಇದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಆಯುಕ್ತ ಸದ್ಯ ಟ್ವೀಟ್ ಮಾಡಿದ್ದು, "ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅವಶ್ಯಕತೆ ಇರುವ ಕೆಲವರ ಕೈಗೆ ಸ್ಟಾಂಪ್ ಹಾಕಲಾಗಿದೆ. ಆದರೆ, ಅದನ್ನು ಪಾಲಿಸದೆ ಅಂತಹ ವ್ಯಕ್ತಿಗಳು ಎಲ್ಲೆಡೆ ಓಡಾಡುತ್ತಿದ್ದಾರೆ. ಇನ್ನು ಮುಂದೆ ಈ ರೀತಿ ಸ್ಟಾಂಪ್ ಉಳ್ಳವರು ಯಾರಾದರೂ ಹೊರಗಡೆ ಓಡಾಡುವುದು ಕಂಡು ಬಂದರೆ 100ಗೆ ಕರೆ ಮಾಡಿ ಮಾಹಿತಿ ತಿಳಿಸಿ. ಅಂತವರನ್ನು ಬಂಧಿಸಿ ಸರ್ಕಾರದ ಕ್ವಾರಂಟೈನ್ ಕಳುಹಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,'' ಎಂದು ಎಚ್ಚರಿಕೆ ನಿಡಿದ್ದಾರೆ.