ಬೆಂಗಳೂರು: ''ಆಪರೇಷನ್ ಕಮಲದ ಬಗ್ಗೆ ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ. ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ'' ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ಸದಾಶಿವ ನಗರ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾನಿದರ ಬಗ್ಗೆ ಮಾತನಾಡಿಲ್ಲ. ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡ್ತೇವೆ. ದೂರು ಪೆಸಿಫಿಕ್ ಆಗಿರಬೇಕು'' ಎಂದರು.
ಅಸಮಾಧಾನ ಇಲ್ಲ: ಪಕ್ಷದಲ್ಲಿ ಕಾರ್ಯಕರ್ತರ ಬೇಸರ ವಿಚಾರವಾಗಿ ಪ್ರತಿಕ್ರಿಯಿಸಿ, ''ಅಸಮಾಧಾನ ಆ ರೀತಿ ಯಾವುದೂ ಇಲ್ಲ. 33 ಮಂದಿ ಮಂತ್ರಿಗಳು ಇದ್ದಾರೆ. ಎಲ್ಲರೂ ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಬದಲಾವಣೆ ತರುತ್ತೇವೆಂದು ಅಧ್ಯಕ್ಷರು ಹೇಳಿದ್ದಾರೆ. ಬೋರ್ಡ್ ಕಾರ್ಪೊರೇಷನ್ ಬಗ್ಗೆ ಸಿಎಂ ಹೇಳಿದ್ದಾರೆ. ನೆಗ್ಲೆಟ್ ಮಾಡುವ ವಿಚಾರ ಯಾವುದೂ ಇಲ್ಲ. ಜೊತೆಗೆ ಕಾರ್ಯಕರ್ತರನ್ನು ಪರಿಗಣಿಸುತ್ತೇವೆ. ಸರ್ಕಾರದ ಭಾಗವಾಗಿ ಅವರನ್ನು ಮಾಡಿಕೊಳ್ತೇವೆ. ಪಕ್ಷಕ್ಕಾಗಿ ದುಡಿದವರು, ಹತ್ತಾರು ವರ್ಷ ಪಕ್ಷಕ್ಕೆ ಕೆಲಸ ಮಾಡಿದವರು, ಇಂತವರನ್ನು ನಿಗಮಗಳಿಗೆ ನೇಮಕ ಮಾಡುತ್ತೇವೆ. ಈಗಾಗಲೇ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ನೇಮಕ ಮಾಡುವ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ'' ಎಂದರು.
ನಮ್ಮ ಮನೆ ವಿಷಯ ಇವರಿಗೆ ಏಕೆ ಬೇಕು?: ಭೋಜನಕೂಟಕ್ಕೆ ಅನೇಕ ವ್ಯಾಖ್ಯಾನ ವಿಚಾರವಾಗಿ ಮಾತನಾಡಿ, ''ಬಿಜೆಪಿಯವರೇ ಕೆಲ ಮುಖಂಡರು ಹೇಳ್ತಿರೋದು. ಅದನ್ನು ತಿರುಚೋದು, ಒಡೆದ ಬಾಗಿಲು, ಮೂರು ಬಾಗಿಲು ಅನ್ನೋದು ಅವರೇ. ಬಣಗಳನ್ನು ಸೃಷ್ಟಿ ಮಾಡೋದನ್ನು ಮಾಡ್ತಿದ್ದಾರೆ. ಇದೆಲ್ಲ ಅವರೇ ಮಾಡುತ್ತಿದ್ದಾರೆ. ಅದಕ್ಕೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡೋದಿಲ್ಲ. ನಮ್ಮ ಮನೆ ವಿಷಯಗಳು ಇವರಿಗೆ ಯಾಕೆ ಬೇಕು? ಯಡಿಯೂರಪ್ಪ ಮನೆಯಲ್ಲಿ ಏನಾಗುತ್ತೆ. ಬೊಮ್ಮಾಯಿ ಮನೆಯಲ್ಲಿ ಏನಾಗುತ್ತದೆ ನಾವು ಕೇಳ್ತೇವಾ?'' ಎಂದು ಪ್ರಶ್ನಿಸಿದರು.
ಸಚಿವರ ಮಕ್ಕಳೇ ಸಚಿವರಾಗ್ತಾರೆಂಬ ಬೇಳೂರು ಆರೋಪ ವಿಚಾರವಾಗಿ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ದಲಿತ ಸಮುದಾಯಕ್ಕೆ ಉನ್ನತ ಹುದ್ದೆ ನೀಡಬೇಕು ಎಂದು ತಿಳಿಸಿದರು.
ಅಜೆಂಡಾ ಇಟ್ಕೊಂಡು ಯಾರೂ ಮಾಡುವುದಿಲ್ಲ: ಹುಲಿ ಉಗುರು ವಿಚಾರ ಮುನ್ನೆಲೆಗೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ''ಅಜೆಂಡಾ ಇಟ್ಕೊಂಡು ಯಾರು ಮಾಡೋದಿಲ್ಲ. ಇಲಾಖೆಯಲ್ಲಿ ತಪ್ಪು ಕಂಡಾಗ ಸರಿಪಡಿಸಲಾಗುತ್ತೆ. ಅದಕ್ಕೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಅವರಿಗೆ ಕೆಲಸ ಇಲ್ಲ, ಅದಕ್ಕೆ ಹೇಳ್ತಾರೆ. ನಮ್ಮ ಆಡಳಿತ ನಾವು ಮಾಡುತ್ತೇವೆ. ಜನ ಸಂತೋಷವಾಗಿದ್ದಾರೆ. ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಜನ ಎಲ್ಲಾದರೂ ಪ್ರತಿಭಟನೆ ಮಾಡ್ತಿದ್ದಾರಾ? ಬಿಜೆಪಿಯವರೇ ಹೇಳಿಕೆಗಳನ್ನು ಕೊಡ್ತಿರೋದು. ಇವರ ಆಂತರಿಕ ಜಗಳ ಮೊದಲು ಸರಿ ಮಾಡಿಕೊಳ್ಳಲಿ. ರಾಜ್ಯಧ್ಯಕ್ಷರನ್ನು ಮೊದಲು ಆಯ್ಕೆ ಮಾಡಲಿ. ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡಲಿ'' ಎಂದು ಬಿಜೆಪಿ ನಾಯಕರಿಗೆ ಪರಮೇಶ್ವರ್ ತಿರುಗೇಟು ನೀಡಿದರು.
ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್ ಪ್ರಕರಣ: ಜಗ್ಗೇಶ್ ವಿರುದ್ಧದ ಅರಣ್ಯಾಧಿಕಾರಿಗಳ ನೋಟಿಸ್‌ಗೆ ಹೈಕೋರ್ಟ್ ತಡೆ