ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಕುರಿಸುವ ವಿಚಾರವಾಗಿ ಇಂದು ಸುಪ್ರೀಂ ಅಂಗಳದಿಂದ ತೀರ್ಪು ಹೊರ ಬೀಳಲಿದೆ. ಈ ಹಿನ್ನೆಲೆ ಈದ್ಗಾ ಮೈದಾನದ ಸುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಗಣೇಶ ಮೂರ್ತಿ ಕೂರಿಸಲು ಅನುಮತಿ ಸಿಕ್ಕರೂ ಅಥವಾ ಸಿಗದಿದ್ದರೂ ಯಾವುದೇ ಅಹಿತಕರ ಘಟನೆ ನಡೆಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಾವಿರಾರು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಪೊಲೀಸ್ ಸರ್ಪಗಾವಲು.. ಭದ್ರತೆಗೆಗಾಗಿ ಮೂವರು ಡಿಸಿಪಿ, 21 ಎಸಿಪಿ, 47 ಇನ್ಸ್ಪೆಕ್ಟರ್, 130 ಪಿಎಸ್ಐ, 126 ಎಎಸ್ಐ 900 ಕಾನ್ಸ್‌ಟೇಬಲ್ಸ್, ಆರ್ಎಎಫ್ 120, ಡಿಸ್ವಾಟ್ 100 ಸೇರಿ 1500 ಪೊಲೀಸರು ಭದ್ರತೆಗೆ ನಿಯೋಜನೆಯಾಗಿದ್ದಾರೆ. ಈ ಹಿನ್ನೆಲೆ ಚಾಮರಾಜಪೇಟೆ ಮೈದಾನ ಸುತ್ತಮುತ್ತ ಪೊಲೀಸರು ರೂಟ್ ಮಾರ್ಚ್ ನಡೆಸಿದ್ದರು. ಸದ್ಯ ಚಾಮರಾಜಪೇಟೆ ಮೈದಾನದ ಸುತ್ತಲೂ ಬ್ಯಾರೀಕೇಡ್ ಹಾಕಿದ್ದು, ಒಂದು ಕಡೆ ಮಾತ್ರ ಮೈದಾನ ಎಂಟ್ರಿಗೆ ಅವಕಾಶ ಕಲ್ಪಿಸಲಾಗಿದೆ.
ಮುಂಜಾಗ್ರತ ಕ್ರಮವಾಗಿ ಪೊಲೀಸರು ಈಗಾಗಲೇ ಪಶ್ಚಿಮ ವಿಭಾಗದಲ್ಲಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಪರಾರಿಯಾದ ರೌಡಿಗಳನ್ನು ಸಹ ಪತ್ತೆ ಮಾಡಿ ಪೊಲೀಸರು ವಾರ್ನ್ ಮಾಡಿ ಸಿಆರ್ಪಿಸಿ ಸೆಕ್ಷನ್ 110 ಅಡಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ಭದ್ರತೆಯಲ್ಲಿ ವಿಶೇಷವಾಗಿ ಆರ್ಎಎಫ್ ಟೀಂ ಇದ್ದು ಡ್ರೋನ್ ಮೂಲಕ ಬಂದೋಬಸ್ತ್ಗೆ ಮೈದಾನದ ಸುತ್ತಮುತ್ತ ನಿಗಾವಹಿಸಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಖಾ ಸುಮ್ಮನೆ ಊಹಾಫೊಹ ಸುದ್ದಿಗಳ ಹರಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಓದಿ: ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಅವಕಾಶ: ಸುಪ್ರೀಂನಲ್ಲಿ ಇಂದು ವಕ್ಫ್ ಮಂಡಳಿ ಅರ್ಜಿ ವಿಚಾರಣೆ