ಬೆಂಗಳೂರು : ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಸಮರಕ್ಕೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಆಯೋಜನೆಗೊಂಡಿರುವ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ನ್ಯೂಜಿಲೆಂಡ್ ಮಣಿಸಿತು. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ vs ಭಾರತ ನಡೆಯಲಿದೆ.
ಮತ್ತೊಂದೆಡೆ, 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತಕ್ಕೆ ಬಂದಿಳಿದಿದೆ. ಭಾರತ-ಪಾಕಿಸ್ತಾನದ ನಡುವಿನ ಪಂದ್ಯ ನೋಡಲು ಕೋಟ್ಯಂತರ ಭಾರತೀಯರು ಕಾದುಕುಳಿತಿದ್ದಾರೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಿಸಿದ ಬಳಿಕ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸರಣಿಗಾಗಿ ಕ್ರಿಕೆಟ್ ತಂಡಗಳ ಪ್ರವಾಸ ಇಂದಿಗೂ ಸಾಧ್ಯವಾಗಿಲ್ಲ. ಐಸಿಸಿ, ಎಸಿಸಿ ಟೂರ್ನಿಗಳಲ್ಲಿ ಮಾತ್ರ ತಟಸ್ಥ ಸ್ಥಳಗಳಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಕೊನೆಯ ಬಾರಿ 2016ರ ಟಿ-ಟ್ವೆಂಟಿ ವಿಶ್ವಕಪ್‌ಗಾಗಿ ಶಾಹಿದ್ ಅಫ್ರಿದಿ ನಾಯಕತ್ವದ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಿತ್ತು.
ವಿಶ್ವಕಪ್‌ನ 2ನೇ ಪಂದ್ಯ ನಾಳೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ನೆದರ್ಲೆಂಡ್ಸ್ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ವಿಶೇಷವೆಂದರೆ, ಪಾಕಿಸ್ತಾನದ ವಿಶ್ವಕಪ್ ತಂಡದಲ್ಲಿರುವ ಹದಿನೈದು ಮಂದಿ ಸದಸ್ಯರ ಪೈಕಿ ಈ ಹಿಂದೆ ಭಾರತ ಪ್ರವಾಸ ಕೈಗೊಂಡಿರುವುದು ಮೊಹಮ್ಮದ್ ನವಾಜ್ ಹಾಗೂ ಸಲ್ಮಾನ್ ಅಲಿ ಆಘಾ ಮಾತ್ರವೇ.
2016ರ ಟಿ-20 ವಿಶ್ವಕಪ್‌ಗಾಗಿ ಶಾಹೀದ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದ ಮೊಹಮ್ಮದ್ ನವಾಜ್ ಭಾರತಕ್ಕೆ ಬಂದಿದ್ದರು. ಆದರೆ ಆಡುವ 11ರ ಬಳಗದಲ್ಲಿ ಸ್ಥಾನ ದೊರೆತಿರಲಿಲ್ಲ. ಮತ್ತೋರ್ವ ಆಟಗಾರ ಸಲ್ಮಾನ್ ಅಲಿ ಆಘಾ, 2014ರಲ್ಲಿ ಭಾರತಕ್ಕೆ ಆಗಮಿಸಿದ್ದರಾದರೂ ಅದು ರಾಷ್ಟ್ರೀಯ ತಂಡದ ಪರವಾಗಿ ಆಗಿರಲಿಲ್ಲ. ಚಾಂಪಿಯನ್ಸ್ ಲೀಗ್ ಟಿ-ಟ್ವೆಂಟಿ ಸರಣಿಗಾಗಿ ಭಾರತಕ್ಕೆ ಆಗಮಿಸಿದ್ದ ಲಾಹೋರ್ ಲಯನ್ಸ್ ತಂಡದಲ್ಲಿ ಈತ ಸ್ಥಾನ ಪಡೆದಿದ್ದರು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಡಾಲ್ಫಿನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಉಳಿದಂತೆ ಪಾಕಿಸ್ತಾನ ತಂಡದಲ್ಲಿರುವ ಹದಿಮೂರು ಜನ ಆಟಗಾರರಿಗೆ ಭಾರತದಲ್ಲಿ ಕ್ರಿಕೆಟ್ ಆಡಿದ ಅನುಭವವಿಲ್ಲ.
ಪಾಕಿಸ್ತಾನ ತಂಡ : ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಇಮಾಮ್ ಉಲ್ ಹಕ್, ಫಕಾರ್ ಜಮಾನ್, ಇಫ್ತಿಕಾರ್ ಅಹ್ಮದ್, ಮೊಹಮ್ಮದ್ ನವಾಜ್, ಶದಾಬ್ ಖಾನ್, ಹಸನ್ ಅಲಿ, ಹ್ಯಾರೀಸ್ ರೌಫ್, ಮೊಹಮ್ಮದ್ ವಾಸಿಂ, ಶಹೀನ್ ಅಫ್ರಿಧಿ, ಸೌದ್ ಶಕೀಲ್, ಸಲ್ಮಾನ್ ಅಲಿ ಆಘಾ, ಉಸ್ಮಾನ್ ಮೀರ್, ಅಬ್ದುಲ್ಲಾ ಶಫೀಕ್
ಇದನ್ನೂ ಓದಿ: 27 ವರ್ಷಗಳ ಬಳಿಕ ಪುಣೆ ಮೈದಾನದಲ್ಲಿ ವಿಶ್ವಕಪ್ ಕ್ರಿಕೆಟ್ ಕಲರವ; 5 ಪಂದ್ಯಗಳಿಗೆ ಆತಿಥ್ಯ