ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಇನ್ನೂ ಒಂದು ತಿಂಗಳು ಪೂರ್ಣಗೊಂಡಿಲ್ಲ. ಇದೀಗ ಎರಡನೇ ಸಲ ಅಧಿಕಾರಿಗಳ ವರ್ಗಾವಣೆ ನಡೆದಿದೆ. ಇಂದು 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೂ ಮೊದಲು 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಈ ಕೆಳಗಿನಂತಿದೆ.
- ಜಾವೇದ್ ಅಖ್ತರ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ.
- ಬಿ.ಸಿ.ಸತೀಶ- ಕಾರ್ಯನಿರ್ವಾಹಕ ನಿರ್ದೇಶಕ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್.
- ಡಾ.ಎಚ್.ಎನ್. ಗೋಪಾಲಕೃಷ್ಣ- ಜಂಟಿ ನಿರ್ದೇಶಕ(ಸುಧಾರಣೆ), ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ.
- ಡಾ.ಎನ್.ಶಿವಶಂಕರ- ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ.
- ಅಕ್ರಂ ಪಾಷಾ- ಜಿಲ್ಲಾಧಿಕಾರಿ, ಕೋಲಾರ.
- ಗಂಗೂಬಾಯಿ ರಮೇಶ್ ಮನ್‌ಕರ್- ಕಾರ್ಯದರ್ಶಿ, ರಾಜ್ಯ ಮಾಹಿತಿ ಆಯೋಗ.
- ಆರ್. ಲತಾ- ಕಾರ್ಯದರ್ಶಿ, ರಾಜ್ಯ ಮಹಿಳಾ ಆಯೋಗ.
- ವೆಂಕಟರಾಜ- ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ.
- ಬಿ.ತೌಜಿಯಾ ತರನುಂ- ಜಿಲ್ಲಾಧಿಕಾರಿ, ಕಲಬುರಗಿ ಜಿಲ್ಲೆ
- ಎನ್.ಎಂ. ನಾಗರಾಜು- ಯೋಜನಾ ನಿರ್ದೇಶಕ, ಕರ್ನಾಟಕ ಏಡ್ಸ್ ನಿಯಂತ್ರಣ ಸೊಸೈಟಿ.
- ಬನ್ವರ್ ಸಿಂಗ್ ಮೀನಾ- ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲಬುರಗಿ ಜಿಲ್ಲಾ ಪಂಚಾಯತ್
- ಜಿ.ಲಿಂಗಮೂರ್ತಿ- ವ್ಯವಸ್ಥಾಪಕ ನಿರ್ದೇಶಕ, ಕೆಆರ್‌ಡಿಸಿಎಲ್
- ಡಾ.ಗಿರೀಶ್ ದಿಲೀಪ್ ಬಾಡೊಲೆ- ಪರೀಕ್ಷಾ ನಿಯಂತ್ರಕರು, ಕೆಪಿಎಸ್‌ಸಿ
- ಡಾ.ನೋಂಗ್ ಜಾಯ್ ಮೊಹಮದ್ ಅಲಿ ಅಕ್ರಂ ಷಾ- ಆಯುಕ್ತರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ
ಸಾರ್ವತ್ರಿಕ ವರ್ಗಾವಣೆ ವಿಸ್ತರಣೆ : ಈಗಾಗಲೇ 2023-24ರ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದೇ ತಿಂಗಳ ಜೂನ್ 30ರವರೆಗೆ ಸಾರ್ವತ್ರಿಕ ವರ್ಗಾವಣೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಈ ಮುಂಚೆ 2023- 24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಜೂ. 15 ರವರೆಗೆ ಕೈಗೊಳ್ಳಲು ಆದೇಶಿಸಲಾಗಿತ್ತು.
ಇದೀಗ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು ಅವಶ್ಯವೆಂದು ಪರಿಗಣಿಸಿ ಸರ್ಕಾರ ಈ ಆದೇಶ ನೀಡಿದೆ. ಜೂ.1 ರಿಂದ ಜೂ.30 ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾರ್ವತ್ರಿಕ ವರ್ಗಾವಣೆ ಮಾಡಲಾಗುತ್ತಿದೆ. ವರ್ಗಾವಣೆಗೆ ಆಯಾಯ ಇಲಾಖಾ ಸಚಿವರುಗಳಿಗೆ ಅಧಿಕಾರ ನೀಡಲಾಗಿದೆ.
2023- 24ನೇ ಸಾಲಿಗೆ ಗ್ರೂಪ್ ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ವರ್ಗಾವಣೆ ಮಾರ್ಗಸೂಚಿ ಹೊರಡಿಸಲಾಗಿದೆ. ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ವಿಸ್ಕೃತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಮಾತ್ರ ಮಾರ್ಗಸೂಚಿಗಳಲ್ಲಿರುವ ಷರತ್ತುಗಳಿಗೊಳಪಟ್ಟು ಮಾಡಬಹುದಾಗಿದೆ. ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ.
ಇದನ್ನೂ ಓದಿ : General Transfers: 2023-24ರ ಸಾಲಿನ ಸಾರ್ವತ್ರಿಕ ವರ್ಗಾವಣೆ ಅವಧಿ ಜೂ.30ಕ್ಕೆ ವಿಸ್ತರಣೆ