ಬೆಂಗಳೂರು: ಐಎಎಸ್ ಅಧಿಕಾರಿ ವಿನೋತ್ ಪ್ರಿಯಾರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ನ ವ್ಯವಸ್ಥಾಪಕ ನಿರ್ದೇಶಕರಾದ ವಿನೋತ್ ಪ್ರಿಯಾ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಪ್ರಭಾರ ಹುದ್ದೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ವಾರ್ತಾ ಇಲಾಖೆ ನಿರ್ದೇಶಕ, ಉಪ ನಿರ್ದೇಶಕ ನಿವೃತ್ತಿ: ಇನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಡಿ.ಪಿ.ಮುರಳೀಧರ್, ಉಪನಿರ್ದೇಶಕರಾದ ಕೆ.ಪಿ.ಪುಟ್ಟಸ್ವಾಮಯ್ಯ, ಆಡಳಿತಾಧಿಕಾರಿ ಲತಾ ಮತ್ತು ಸಿಬ್ಬಂದಿ ಧನರಾಜ್ ಅವರ ಸೇವಾವಧಿ ನಿವೃತ್ತಿ ಹಿನ್ನೆಲೆ ಇಲಾಖೆಯ ವಾರ್ತಾ ಬಳಗದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಮುರುಳೀಧರ್, ಸರ್ಕಾರ ಮತ್ತು ಮಾಧ್ಯಮಗಳ ಕೊಂಡಿಯಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ಸಂತೋಷ ತಂದಿದೆ. ಮಾಧ್ಯಮ ರಂಗದ ಅನುಭವ ಹಿನ್ನೆಲೆ ಇರುವ ಅಧಿಕಾರಿಗಳೇ ಇಲಾಖೆಯ ನಿರ್ದೇಶಕರಾದರೇ ಇಲಾಖೆಯನ್ನು ಹೆಚ್ಚು ವೃತ್ತಿಪರವಾಗಿ ಕಟ್ಟಬಹುದು.
ಸರ್ಕಾರ ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಬೇಕು. ಇಲಾಖೆಗೆ 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಕೆಲವೇ ಬೆರಳಿಕೆಯಷ್ಟು ಅಧಿಕಾರಿಗಳಿಗೆ ಮಾತ್ರ ನಿರ್ದೇಶಕ ಸ್ಥಾನಕ್ಕೇರುವ ಅವಕಾಶ ದೊರೆತಿದೆ ಎಂದರು. ತಮ್ಮ ಸೇವಾವಧಿಯುದ್ದಕ್ಕೂ ಸಲಹೆ-ಸಹಕಾರ ಮಾರ್ಗದರ್ಶನ ನೀಡಿದ ಅಧಿಕಾರಿಗಳ ನೆನಪುಗಳನ್ನು ಹಾಗೂ ಮಾಧ್ಯಮದವರ ಸಹಕಾರವನ್ನು ಮೆಲುಕು ಹಾಕಿದರು.
ಇಲಾಖೆಯಲ್ಲಿ ಬಹಳಷ್ಟು ಜನರು ನಿವೃತ್ತಿಯಾಗುತ್ತಿದ್ದಾರೆ, ಆದರೇ ನೇಮಕವಾಗುತ್ತಿಲ್ಲ. ಇಲಾಖೆಯ ಒಟ್ಟಾರೆ ಮಂಜೂರಾದ ಹುದ್ದೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಕಡಿಮೆ ಮಾನವ ಸಂಪನ್ಮೂಲದೊಂದಿಗೆ ಕೆಲಸಗಳನ್ನು ನಿಭಾಯಿಸುವುದು ಸವಾಲಿನ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಇಲಾಖೆಯ ಕೆಲಸ ಕಾರ್ಯಗಳಿಗೆ ಅಗತ್ಯ ಸಲಹೆ-ಮಾರ್ಗದರ್ಶನಗಳನ್ನು ನೀಡುವುದರ ಮೂಲಕ ಒತ್ತಾಸೆಯಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.
ಉಪನಿರ್ದೇಶಕ ಕೆ.ಪಿ.ಪುಟ್ಟಸ್ವಾಮಯ್ಯ ಅವರು ಮಾತನಾಡಿ, ಮಾಧ್ಯಮ ನಿರ್ವಹಣೆ ಅತ್ಯಂತ ಸವಾಲಿನದ್ದು, ಎಲ್ಲರೊಂದಿಗೆ ಸಂಪರ್ಕ ಸಾಧಿಸಿ ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಇದೆ. ಇಲಾಖೆ ನನಗೆ ಅವಕಾಶ ಕಲ್ಪಿಸಿದ್ದು ನನ್ನ ಸೌಭಾಗ್ಯ ಎಂದರು.
ಇದನ್ನೂ ಓದಿ: ಮಾಧ್ಯಮ ವಕ್ತಾರರು, ಮಾಧ್ಯಮ ನಿರ್ವಹಣಾ ತಂಡದೊಂದಿಗೆ ಸಭೆ ನಡೆಸಿದ ಮೋದಿ