ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಆರೋಪಿಯಾಗಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್‌ಗೆ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ. ರೋಹಿಣಿ ಸಿಂಧೂರಿ ದಾಖಲಿಸಿರುವ ಖಾಸಗಿ ಕ್ರಿಮಿನಲ್ ದೂರಿನ ವಿಚಾರಣೆ ನಡೆಸಿದ ನಗರದ 24ನೇ ಎಸಿಎಂಎಂ ಕೋರ್ಟ್, ಶುಕ್ರವಾರ (ಮಾರ್ಚ್24) ರಂದು ಈ ಆದೇಶ ಮಾಡಿ ವಿಚಾರಣೆ ಮುಂದೂಡಿದೆ.
ಡಿ.ರೂಪಾ ಮೌದ್ಗಿಲ್ ಫೆಬ್ರವರಿ 14 ಮತ್ತು 19 ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ಮಾಧ್ಯಮಗಳಲ್ಲಿ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಆ ಎಲ್ಲಾ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರುದ್ದೇಶದಿಂದಲೇ ರೂಪಾ ಈ ಕೃತ್ಯ ಎಸಗಿದ್ದಾರೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಮಾರ್ಚ್ 3ರಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅಲ್ಲದೇ ಡಿ.ರೂಪಾ ಅವರಿಂದ ಒಂದು ಕೋಟಿ ರೂಪಾಯಿಯ ಪರಿಹಾರ ಕೊಡಿಸಿಕೊಡಬೇಕು ಮತ್ತು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಸಿಂಧೂರಿ ಕೋರಿದ್ದರು.
ಇದನ್ನೂ ಓದಿ: ರಗ್ಗು, ದಿಂಬು, ತಟ್ಟೆ ಹಿಡಿದು ರೋಹಿಣಿ ಸಿಂಧೂರಿ ಅಭಿಮಾನಿಗಳ ಪ್ರತಿಭಟನೆ
ಪ್ರಶ್ನೆಗಳ ಸುರಿಮಳೆ ಹರಿಸಿದ್ದ ಡಿ.ರೂಪ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಪ್ರಶ್ನೆಗಳ ಸುರಿಮಳೆ ಹರಿಸಿದ್ದರು. ಶಾಸಕ ಸಾ.ರಾ.ಮಹೇಶ್ ಅವರ ಬಳಿ ರೋಹಿಣಿ ಸಿಂಧೂರಿ ಸಂಧಾನಕ್ಕೆ ಹೋಗಿದ್ದರು ಎಂಬ ಸುದ್ದಿಯನ್ನು ಆಧರಿಸಿ ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಡಿ.ರೂಪಾ ಅವರು ಪ್ರಶ್ನೆ ಕೇಳಿದ್ದರು.
"ಸಂಧಾನಕ್ಕೆ ಹೋಗುವುದು ಅಂದರೆ ಅರ್ಥ ಏನು? ಯಾವ ಐಎಎಸ್ ಅಧಿಕಾರಿ ಕೂಡ ಎಂಎಲ್ಎ ಅಥವಾ ರಾಜಕೀಯ ವ್ಯಕ್ತಿಗಳ ಜೊತೆ, ತಾವು ನಿರ್ವಹಿಸಿದ ಕರ್ತವ್ಯ ನಿಮಿತ್ಯ ಸಂಧಾನಕ್ಕೆ ಹೋಗಿರುವುದನ್ನು ನಾನು ಇದೇ ಮೊದಲು ಕೇಳಿದ್ದೇನೆ. ಹಾಗಾದರೆ, ರೋಹಿಣಿ ಸಿಂಧೂರಿ ಐಎಎಸ್ ಸಂಧಾನಕ್ಕೆ ಹೋಗಿದ್ದು ಯಾಕೆ? ಆಕೆ ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ? ತಮ್ಮ ಕರ್ತವ್ಯ ಲೋಪದ ಬಗ್ಗೆಯೋ, ತಮ್ಮ ಭ್ರಷ್ಟಾಚಾರ ಬಗ್ಗೆಯೋ ಏನು? ಎಂದು ಡಿ.ರೂಪಾ ಸಾಮಾಜಿಕ ಜಾಲತಾಣದಲ್ಲಿ ಈ ಮೊದಲು ಪ್ರಶ್ನಿಸಿದ್ದರು.
ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಮಾಧ್ಯಮಗಳಿಗೆ ಹಾಗೂ 60ನೇ ಪ್ರತಿವಾದಿಯಾಗಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರಿಗೆ ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿ ಆದೇಶಿಸಿತ್ತು.
ಇದನ್ನೂ ಓದಿ : ರೂಪಾ ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ, ಸಂಬಂಧಿಸಿದವರು ಉತ್ತರಿಸಲಿ: ಪ್ರತಾಪ್ ಸಿಂಹ