ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಹಿಂದೆ ರಾಜಕೀಯ ವಾಸನೆಯಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ತಿರುಗೇಟು ನೀಡಿದ್ದು, ವಿನಾ ಕಾರಣ ಆರೋಪ ಮಾಡುವುದು ಸರಿಯಲ್ಲ. ಅವರ ಕನಸಿನಲ್ಲಿ ಕಾಡುತ್ತಿದ್ದೇನೆ ಅನಿಸುತ್ತೆ. ಅದಕ್ಕೆ ನನ್ನ ಮೇಲೆ ಆಪಾದನೆ ಹೊರಿಸಿದ್ದಾರೆ ಎಂದಿದ್ದಾರೆ.
ಕೊಲೆ ಹಿನ್ನೆಲೆ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ರಮೇಶ್ ಏನ್ ಮಾಡುತ್ತಿದ್ದಾರೆ ಎಂಬುವುದು ಗೊತ್ತಿದೆ. ಎಲ್ಲೆಲ್ಲಿ ರೋಲ್ ಕಾಲ್ ಮಾಡುತ್ತಿದ್ದಾರೆ ಗೊತ್ತಿದೆ. ಈಗ ಅದರ ಬಗ್ಗೆ ಚರ್ಚೆ ಮಾಡುವುದು ಬೇಡ. ಅವರು ನಿಂತು ಮಾಡಬೇಕಾದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಕೊಲೆಯಾದಾಗ ನಾನು ಆಸ್ಪತ್ರೆಗೆ ಬಂದಿದ್ದೇನೆ ಎಂದರೆ ಅರ್ಥ ಮಾಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೊದಲಿಗೆ ರೇಖಾ ಕದಿರೇಶ್ ಕೊಲೆ ವಿಚಾರ ಕೇಳಿ ನನಗೂ ಶಾಕ್ ಆಯಿತು. ರೇಖಾ ನನ್ನ ತಂಗಿಯ ರೀತಿ ಇದ್ದರು. ನನ್ನ ಕ್ಷೇತ್ರದಲ್ಲಿ ಯಾವುದೇ ಕೆಲಸವಾದರೂ ಅವರನ್ನ ಕರೆಯುತ್ತಿದ್ದೆ. 2018 ರಲ್ಲಿ ಆಕೆ ಗಂಡನನ್ನು ಕಳೆದುಕೊಂಡಿದ್ದರು. ಇಂದು ಇವರ ಕೊಲೆಯಾಗಿದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ತಪ್ಪಿತಸ್ಥರನ್ನ ಕೂಡಲೇ ಹಿಡಿಯುವ ಕೆಲಸ ಆಗಬೇಕಿದೆ ಎಂದು ಒತ್ತಾಯಿಸಿದರು.
ರೇಖಾ ಮಕ್ಕಳಿಗೆ ಆಸರೆಯಾಗುವೆ. ರೇಖಾ ನನ್ನ ತಂಗಿ ಇದ್ದಂತೆ. ಅವಳ ಮಕ್ಕಳು ಇದೀಗ ಅನಾಥರಾಗಿದ್ದಾರೆ. ರೇಖಾ ಮಕ್ಕಳನ್ನು ಕಾಪಾಡುವ ಕೆಲಸ ನಾನು ಮಾಡುತ್ತೇನೆ. ಯಾರದೋ ದ್ವೇಷಕ್ಕೆ ಇನ್ಯಾರನ್ನೋ ಬಲಿ ತೆಗೆದುಕೊಳ್ಳೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಓದಿ: ರಾಜ್ಯದಲ್ಲಿ Delta ಪ್ಲಸ್ ರೋಗದಿಂದ ವ್ಯಕ್ತಿ ಸಂಪೂರ್ಣ ಗುಣಮುಖ: ಮುಖ್ಯ ಆಯುಕ್ತ ಗೌರವ್ ಗುಪ್ತಾ