ಬೆಂಗಳೂರು: ಮಾಜಿ ಸಚಿವ ಎಂ.ಆರ್.ಸೀತಾರಾಂ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಂತೆ ಕಾಣುತ್ತಿದ್ದು, ಪಕ್ಷ ತೊರೆಯುವ ಪರೋಕ್ಷ ಸೂಚನೆ ನೀಡಿದ್ದಾರೆ.
"ಮುಂದಿನ ಸಮಾವೇಶದಲ್ಲಿ ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಮಾಡುತ್ತೇನೆ. ನನ್ನ ನಿರ್ಣಯ ಬಹು ಜನರಿಗೆ ಇಷ್ಟ ಆಗಲಿದೆ. ಸೌಮ್ಯವಾಗಿ ಇರೋದು ಹಲವರಿಗೆ ಆಯುಧ. ಪರಿಷತ್ ಚುನಾವಣೆಯಾಗಿ ಒಂದು ತಿಂಗಳಾಗಿದೆ. ಒಂದು ತಿಂಗಳಾದ್ರೂ ಸೌಜನ್ಯಕ್ಕಾದರೂ ಯಾರೂ ಮಾತನಾಡಿಸಿಲ್ಲ. ಇದುವರೆಗೆ ಟಿಕೆಟ್ ವಂಚಿತರ ಜತೆ ನಾಯಕರು ಮಾತನಾಡಿಲ್ಲ. ಅವರಿಂದ ನಾನೂ ಏನನ್ನೂ ಬಯಸೋದಿಲ್ಲ" ಎಂದು ಕಿಡಿ ಕಾರಿದರು.
"ನಾನು ಮಂತ್ರಿಯಾಗಿದ್ದಾಗ ಸರ್ಕಾರದ ದುಡ್ಡಲ್ಲಿ ಕಾಫಿ, ಟೀ ಸಹ ಕುಡಿದಿಲ್ಲ. ಕೆಲವರು ನಾನು ಕಾಂಗ್ರೆಸ್ ಬಿಡಬಾರದು ಎನ್ನುತ್ತಾರೆ. ಕಾಂಗ್ರೆಸ್ನವರು ನನಗೆ ಏನೆಲ್ಲಾ ಮಾಡಿದ್ದಾರೆ ಅಂತಾರೆ. ಯಾರು ಏನು ಮಾಡಿದ್ದಾರೆ, ಮಾಡಿಲ್ಲ ಅಂತ ನಂಗೊತ್ತು. ಸಿದ್ದರಾಮಯ್ಯ ನನ್ನ ಮಂತ್ರಿ ಮಾಡಿದ್ರು. ಎರಡು ವರ್ಷ ಮಂತ್ರಿಯಾಗಿ ನಾನು ಸೇವೆ ಮಾಡಿದೆ" ಎಂದರು.
ವೀರಪ್ಪ ಮೊಯ್ಲಿ ವಿರುದ್ಧ ಅಸಮಾಧಾನ: 2009ರಲ್ಲಿ ಚಿಕ್ಕಬಳ್ಳಾಪುರ ಲೋಕಸಭೆಯಲ್ಲಿ ನನಗೆ ಬಿ ಫಾರಂ ತಪ್ಪಿಸಲಾಯ್ತು. ವೀರಪ್ಪ ಮೊಯ್ಲಿಯವ್ರು ದೆಹಲಿಯಿಂದ ಹೈ ಜಂಪ್ ಲಾಂಗ್ ಜಂಪ್ ಮಾಡ್ಕೊಂಡು ಬಂದು ಸ್ಪರ್ಧೆ ಮಾಡಿದ್ರು. ನಂತರದ ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ಅಂತ ಮೊಯ್ಲಿ ಹೇಳಿದ್ರು. ಆದ್ರೆ ಆ ಚುನಾವಣೆಯಲ್ಲೂ ಅವರೇ ನಿಂತ್ರು, ನಂತರ ಸೋತ್ರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಬಿಐನಿಂದ ಹೊಸ ನೋಟಿಸ್ : ಜುಲೈ 1ಕ್ಕೆ ನ್ಯಾಯಾಲಯಕ್ಕೆ ಹಾಜರಾಗುತ್ತೇನೆ ಎಂದ ಡಿಕೆಶಿ
ರಕ್ಷಾ ರಾಮಯ್ಯಗೂ ಅನ್ಯಾಯ: ನನ್ನ ಮಗ ರಕ್ಷಾ ರಾಮಯ್ಯಗೂ ಪಕ್ಷದಿಂದ ಅನ್ಯಾಯ ಆಗಿದೆ. ಒಂದೇ ವರ್ಷದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದ್ರು. ಮೂರು ದಿನ ಮುಂಚೆಯೇ ಹೋಗಿ ಅವರು ರಾಜೀನಾಮೆ ಕೊಟ್ಟರು. ಇದಾದ ಐದು ತಿಂಗಳ ನಂತರ ನನ್ನ ಮಗನನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮಾಡಿದ್ರು. ನನಗೆ ಅಸಮಾಧಾನ ಆಗಿದೆ ಅಂತ ಗೊತ್ತಾಗಿ ಜನರಲ್ ಸೆಕ್ರೆಟರಿ ಸ್ಥಾನ ಕೊಟ್ರು ಎಂದು ವಾಗ್ದಾಳಿ ನಡೆಸಿದರು.