ಬೆಂಗಳೂರು: ವಿಧಾನಪರಿಷತ್ಗೆ ನಾಮನಿರ್ದೇಶನ ಸ್ಥಾನಗಳ ಭರ್ತಿ ವೇಳೆ ನನಗೆ ಅವಕಾಶ ಸಿಗಲಿದೆ ಎಂದು ಹೆಚ್. ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಸದಾಶಿವನಗರದಲ್ಲಿ ನಿರ್ಮಿಸಿರುವ ನೂತನ ನಿವಾಸದ ಗೃಹ ಪ್ರವೇಶ ಸಮಾರಂಭದಲ್ಲಿ ಹೆಚ್. ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಮೇಲ್ಮನೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ನಾಲಿಗೆ ಮೇಲೆ ನಡೆಯೋ ನಾಯಕ ಯಡಿಯೂರಪ್ಪ, ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೂ ಅವಕಾಶ ಮಾಡಿಕೊಡ್ತಾರೆ ಎಂಬ ನಂಬಿಕೆ ಇದೆ. ಮುಂದೆ ಪರಿಷತ್ಗೆ ನಾಮಕರಣ ಮಾಡುವ ವೇಳೆ ಗುರುತಿಸುತ್ತಾರೆ ಎಂದರು.
ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಎಲ್ಲೂ ಅವಕಾಶ ಕೊಡಬೇಡಿ ಅಂತ ಹೇಳಿಲ್ಲ. ನೀವು ಜನರ ಮುಂದೆ ನಿಂತು ಬನ್ನಿ ಎಂದಿದೆ. ನಾವು ಜನರ ಎದುರು ನಿಂತು ಸೋತು ಬಂದಿದ್ದೇವೆ. ಸುಪ್ರೀಂ ತೀರ್ಪು ನಮಗೆ ಅಡ್ಡ ಬರುವುದಿಲ್ಲ. ನಮಗೆ ಖಂಡಿತ ಅವಕಾಶ ಸಿಕ್ಕೇ ಸಿಗುತ್ತದೆ ಎಂದರು.
ಆರ್. ಶಂಕರ್ ಮಾತನಾಡಿ, ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದರು. ಪರಿಷತ್ ಸ್ಥಾನನಗಳ ನಾಮಕರಣ ಮಾಡುವ ವೇಳೆ ಅಣ್ಣನಿಗೆ ಅವಕಾಶ ಕೊಡುತ್ತಾರೆ. ಈ ಬಗ್ಗೆ ನಾವು ಸಿಎಂ ಅವರಿಗೆ ಮನವಿ ಮಾಡುತ್ತೇವೆ. ಸಿಎಂ ಭರವಸೆ ಕೊಟ್ಟಿದ್ದಾರೆ, ಅವರಿಗೆ ಕೊಟ್ಟೇ ಕೊಡುತ್ತಾರೆ. ಬೇರೆಯವರ ಬಗ್ಗೆ ಗೊತ್ತಿಲ್ಲ, ಆದರೆ ನಾನಂತೂ ವಿಶ್ವನಾಥ್ ಪರ ಒತ್ತಡ ತರುತ್ತೇನೆ. ಈಗ ಅವರಿಗೆ ವಯಸ್ಸಾಗಿದೆ ಇಂತ ಸಂದರ್ಭದಲ್ಲಿ ಮಿಸ್ ಮಾಡಿದರೆ ಬೇರೆ ಅರ್ಥ ಹೋಗುತ್ತದೆ. ಆಗಲೂ ನಾವೆಲ್ಲ ಒಟ್ಟಾಗಿಯೇ ಬಂದಿದ್ದೆವು, ಈಗಲೂ ವಿಶ್ವನಾಥ್ ಪರ ನಾವು ನಿಲ್ಲುತ್ತೇವೆ ಎಂದರು.