ಬೆಂಗಳೂರು: ಹೈ ವೋಲ್ಟೇಜ್ಗೂ ಉತ್ತರ ಕೊಡುತ್ತೇನೆ, ಲೋ ವೋಲ್ಟೇಜ್ಗೂ ಉತ್ತರ ಕೊಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸದಾಶಿವ ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿ (ಆದಾಯ ತೆರಿಗೆ ಇಲಾಖೆ) ದಾಳಿ ಸಂಬಂಧ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ನಕಲಿಗಳಿಗೂ ಉತ್ತರ ಕೊಡುತ್ತೇನೆ, ಲೂಟಿಗಳಿಗೂ ಉತ್ತರ ಕೊಡುತ್ತೇನೆ. ಎಲ್ಲರಿಗೂ ಉತ್ತರ ಕೊಡುತ್ತೇನೆ, ಸ್ವಲ್ಪ ಕಾಯಿರಿ ಎಂದು ತಿರುಗೇಟು ನೀಡಿದರು. ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಹೋರಾಟ ಮಾಡಲಿ, ಮಾಡಲೇಬೇಕು. ಪ್ರತಿಭಟನೆ ಮಾಡಿದಾಗಲೇ ಅವರ ಲೂಟಿಗಳೆಲ್ಲ ಜನರಿಗೆ ಗೊತ್ತಾಗುತ್ತದೆ. ಎಲ್ಲವನ್ನೂ ಬಿಚ್ಚಿಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಖರ್ಗೆ ನಿವಾಸದಲ್ಲಿ ಸಭೆ: ಇದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸದಲ್ಲಿ ಸಭೆ ನಡೆಯಿತು. ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಖರ್ಗೆ ನಿವಾಸದಲ್ಲಿ ಉಪಹಾರ ಸೇವಿಸಿ, ಸಭೆಯಲ್ಲಿ ಪಾಲ್ಗೊಂಡರು. ಐಟಿ ದಾಳಿ, ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಹೋರಾಟದ ಬಗ್ಗೆ ಸಮಾಲೋಚಿಸಿದರು. ಉಳಿದಂತೆ ನಿಗಮ ಮಂಡಳಿಗಳ ನೇಮಕಾತಿ ಸಂಬಂಧವೂ ಎಐಸಿಸಿ ಅಧ್ಯಕ್ಷರ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ನಿಗಮ ಮಂಡಳಿಗಳ ನೇಮಕಾತಿ ಕಗ್ಗಂಟಾಗಿದ್ದು, ಶಾಸಕರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಸಮತೋಲನ ಕಾಪಾಡುವ ಬಿಕ್ಕಟ್ಟು ಎದುರಾಗಿದೆ. ಕಾರ್ಯಕರ್ತರು ನಿಗಮ ಮಂಡಳಿಯಲ್ಲಿ ನಮಗೇ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇತ್ತ ಶಾಸಕರೂ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಎಐಸಿಸಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಬೆಂಗಳೂರಲ್ಲಿ ಚಿನ್ನದ ವ್ಯಾಪಾರಿಗಳು ಹಾಗೂ ಉದ್ಯಮಿಗಳ ಮನೆಗಳ ಮೇಲೆ ಐಟಿ ದಾಳಿ ಮಾಡಿದ್ದು, ಗುತ್ತಿಗೆದಾರರೊಬ್ಬರ ಪುತ್ರನ ಮನೆಯಲ್ಲಿ 42 ಕೋಟಿ ರೂ ಹಣ ದೊರಕಿತ್ತು. ಕೋಟಿ ಕೋಟಿ ಹಣ ಪತ್ತೆಯಾದ ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ಸೇರಿದಂತೆ ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡಲು ಶುರು ಮಾಡಿದ್ದವು.
ಇದನ್ನೂ ಓದಿ: ಹೆಚ್ಡಿಕೆ ತಿಹಾರ್ ಜೈಲ್ ಬಗ್ಗೆ ಮಾತನಾಡುತ್ತಾರೆ, ಅವರು ಏನೇನು ಮಾತಾಡಿಕೊಂಡು ಬಂದಿದ್ದಾರೆ ಗೊತ್ತಿದೆ: ಡಿಸಿಎಂ ಡಿಕೆಶಿ