ಬೆಂಗಳೂರು: ದೂರವಾಣಿ ಕದ್ದಾಲಿಕೆ ಆರೋಪ ಪ್ರಕರಣ ಸಿಬಿಐಗೆ ವಹಿಸಲು ನಾನು ಹೇಳಿರುವುದಾಗಿ ಸಿಎಂ ಬಿಎಸ್ವೈ ಸುಳ್ಳು ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಫೋನ್ ಕದ್ದಾಲಿಕೆ ಆರೋಪವನ್ನು ಸಿಬಿಐಗೆ ಒಪ್ಪಿಸಬೇಕೆಂದು ನಾನು ಹೇಳಿದ್ದೆನೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೇಳಿರುವುದು ಅಪ್ಪಟ ಸುಳ್ಳು. ನಾನು ಹಾಗೆ ಒತ್ತಾಯಿಸಿರುವುದನ್ನು ಅವರು ಸಾಬೀತು ಪಡಿಸಲಿ. ಒಬ್ಬ ಮುಖ್ಯಮಂತ್ರಿಯಾಗಿ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಫೋನ್ ಕದ್ದಾಲಿಕೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದಷ್ಟೇ ನಾನು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದಿರುವ ರಹಸ್ಯವೇನು?
ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಗಣಿ ಹಗರಣವೂ ಸೇರಿದಂತೆ ಯಾವ ಹಗರಣಗಳನ್ನೂ ಸಿಬಿಐ ತನಿಖೆಗೆ ಒಪ್ಪಿಸಲಿಲ್ಲ. ಫೋನ್ ಕದ್ದಾಲಿಕೆ ಆರೋಪದ ತನಿಖೆಯನ್ನು ನಮ್ಮದೇ ಸಿಐಡಿಗೆ ಒಪ್ಪಿಸಬಹುದಿತ್ತಲ್ಲಾ? ಈಗ ಸಿಬಿಐ ಬಗ್ಗೆ ಎಲ್ಲಿಂದ ನಂಬಿಕೆ ಬಂತು? ಇದರ ಹಿಂದಿರುವ ರಹಸ್ಯವೇನು? ಎಂದು ಪ್ರಶ್ನೆ ಹಾಕಿದ್ದಾರೆ.
ವಿಶ್ವಾಸ ಗೌರವ ಹೇಗೆ ಬಂತು?
ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಿಬಿಐಅನ್ನು ‘’ಚೋರ್ ಬಚಾವೋ ಸಂಸ್ಥೆ’’ ಎಂದು ಗೇಲಿ ಮಾಡುತ್ತಿದ್ದ ಬಿಜೆಪಿ ನಾಯಕರಿಗೆ ಈಗ ಅದರ ಬಗ್ಗೆ ಇಷ್ಟೊಂದು ವಿಶ್ವಾಸ-ಗೌರವ ಯಾಕೆ ಹುಟ್ಟಿಕೊಂಡಿದೆ ಎನ್ನುವುದು ನನ್ನ ಪ್ರಶ್ನೆ ಎಂದು ತಮ್ಮ ಟ್ವೀಟ್ನಲ್ಲಿ ಸಿದ್ದರಾಮಯ್ಯ ಕೇಳಿದ್ದಾರೆ.