ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವವನ್ನು ನಾನು ಪ್ರಶ್ನೆ ಮಾಡಿಲ್ಲ ಎಂದು ಜೆಡಿಎಸ್ ಹಿರಿಯ ನಾಯಕ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಶಾಸಕರ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಾಯಕತ್ವ ಆಗಲೀ, ಕುಮಾರಸ್ವಾಮಿ ಅವರ ನಾಯಕತ್ವ ಆಗಲೀ ನಾನು ಪ್ರಶ್ನೆ ಮಾಡಿಲ್ಲ ಎಂದರು.
ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರ ಮೇಲೆ ನನಗೆ ಗೌರವವಿದೆ. ಆದರೆ ನಮ್ಮ ನೋವನ್ನು ಅವರು ಕೇಳಿಲ್ಲ. ಸಭಾಪತಿ ಸ್ಥಾನ ಕೈತಪ್ಪಿದಾಗ ಕಣ್ಣೀರು ಹಾಕಿದ್ದೆ. ಆಗಲೂ ನನ್ನನ್ನು ಕರೆದು ಮಾತನಾಡಿಸಲಿಲ್ಲ. ಮೊನ್ನೆ ನನ್ನ ಜೊತೆ ದೇವೇಗೌಡರು ಮಾತನಾಡಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಅವರು ಹೇಳಿದ್ದಾರೆ ಅಂತಾ ತಿಳಿಸಿದರು.
ಮೈತ್ರಿ ಸರ್ಕಾರ ಇದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನ ಇದೆ. ಆದರೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಆ ರೀತಿ ಏನಾದರೂ ಅಸಮಾಧಾನ ಇದ್ದರೆ ಬಹಿರಂಗವಾಗಿಯೇ ಹೇಳುತ್ತೇವೆ. ಕುಮಾರಸ್ವಾಮಿ ಅವರಿಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ನನಗಿಲ್ಲ ಎಂದರು.
ನಾನು ಪಕ್ಷ ಬಿಡುವ ಯೋಚನೆ ಮಾಡಿಲ್ಲ. ಎಲ್ಲರೂ ಸೇರಿ ಮಾತನಾಡೋದು ತಪ್ಪಾ?. ನಾನು ಹಿರಿಯ ಸದಸ್ಯ. ಮನೆಯ ಯಜಮಾನನ ರೀತಿ ಕೂತು ಚರ್ಚೆ ಮಾಡಿದ್ದೇವೆ. ಈ ಕ್ಷಣದವರೆಗೂ ಪಕ್ಷ ಬಿಡುವ ಯೋಚನೆ ಮಾಡಿಲ್ಲ. ನಾನು ಹೋಗುವದಾದರೆ ಮಾಧ್ಯಮಗಳಿಗೆ ಮತ್ತು ದೇವೇಗೌಡರಿಗೆ ಹೇಳಿ ಹೋಗುತ್ತೇನೆ ಎಂದರು.
1983ರಿಂದ ಜನತಾ ಪರಿವಾರದಲ್ಲೇ ಇದ್ದೇನೆ. ತರಾತುರಿಯಲ್ಲಿ ಪಕ್ಷ ಬಿಡುವ ಅನಿವಾರ್ಯತೆ ಇಲ್ಲ. ವಿಧಾನ ಪರಿಷತ್ ಸದಸ್ಯರು ಯಾರು ನನ್ನ ಜೊತೆ ಮಾತನಾಡಿಲ್ಲ. ನಾನು ಅಷ್ಟು ದೊಡ್ಡವನಲ್ಲ ಎಂದು ಹೇಳಿದರು.
ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವು ಸದಸ್ಯರು ಬೇರೆ ಬೇರೆ ಕೆಲಸಗಳ ನಿಮಿತ್ತ ತೆರಳಿದ್ದಾರೆ. ಹಾಗಾಗಿ ಇವತ್ತು ಸಭೆ ನಡೆಸುವುದಕ್ಕೆ ಆಗುವುದಿಲ್ಲ. ಮತ್ತೊಂದು ದಿನ ಸಭೆ ಸೇರಿ ಚರ್ಚಿಸಲಾಗುವುದು. ಅಧಿವೇಶನ ಇದ್ದಾಗ 11 ಮಂದಿ ಸದಸ್ಯರು ಸೇರಿದ್ದೆವು. ಇವತ್ತು ಯಾವುದೇ ಸಭೆ ನಡೆಸ್ತಿಲ್ಲ. ಐದಾರು ಮಂದಿ ಇದ್ದೇವೆ ಅಷ್ಟೇ. ನನ್ನ ಜೊತೆ ಯಾವ ಶಾಸಕರೂ ಪಕ್ಷ ಬಿಡುವ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.