ಬೆಂಗಳೂರು: ಯಾವ ಗೂಳಿ ಕಂಟಕವು ನನಗಿಲ್ಲ. ಜನರ ಪ್ರೀತಿ ಆಶೀರ್ವಾದವೇ ಎಲ್ಲಾ ಎಂದು ಗೂಳಿಯಿಂದ ಗುದ್ದಿಸಿಕೊಂಡ ಘಟನೆ ಕುರಿತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಡಾಲರ್ಸ್ ಕಾಲೋನಿಯ ಸಿಎಂ ನಿವಾಸದಲ್ಲಿ ಮಾತನಾಡಿದ ಅವರು, ಕೆಲವೊಬ್ಬರು ನಾನು ಮಣ್ಣಿನ ಮಗ ಅಂತ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ನಾನು ಮಣ್ಣಿನ ಮಗ ಅಂತ ಹೇಳೋದಿಲ್ಲ. ಚಿಕ್ಕವಯಸ್ಸಿನಿಂದಲೂ ರೈತ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ನೇಗಿಲ ಹೊಡೆದು, ಕುಂಟೆ ಹಿಡಿದು, ಹಸು, ಎಮ್ಮೆ, ಎತ್ತುಗಳನ್ನು ಸಾಕಿದ್ದೇವೆ. ಹಾಲು ಸಹ ಕರೆದಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬಕ್ಕೆ ಟಾಂಗ್ ನೀಡಿದರು.
ಹೋರಿ ಬೆದರಿಸೋ ಕಾರ್ಯಕ್ರಮಕ್ಕೆ ನನ್ನ ಕ್ಷೇತ್ರದ ಜನ ಕರೆದಿದ್ದರು. ನನ್ನನ್ನ ಎತ್ತಿಕೊಂಡು ಹೋಗುವ ಸಂದರ್ಭದಲ್ಲಿ ಹೋರಿ ಹಾರಿ ಬಂತು. ಹಾಗಾಗಿ ತಿವಿತಕ್ಕೆ ಒಳಗಾಗಬೇಕಾಯಿತು. ನನ್ನ ಅಭಿಮಾನಿಯೊಬ್ಬ ಅಣ್ಣ ಒಂದು ಬಾರಿ ಹೋರಿ ಮುಟ್ಟಿ ಅಂದ. ಆ ಸಂದರ್ಭದಲ್ಲಿ ಒಬ್ಬರ ಕೈ ಹೋರಿ ಕಣ್ಣಿಗೆ ತಗುಲಿದೆ. ಈ ವೇಳೆ ಹೋರಿ ಹಿಂದೆ ಎಗರಿದೆ ಅಷ್ಟೇ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಲ್ಲ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರು ಸಿಎಂ ಆಗಿದ್ದಾಗ ಎಷ್ಟು ದುರ್ಘಟನೆಗಳು ಆಗಿವೆ. ಕೇವಲ ಪ್ರತಿಪಕ್ಷ ನಾಯಕನಾಗಿದ್ದೇನೆ ಅಂತಾ ಆರೋಪ ಮಾಡೋದು ಸರಿಯಲ್ಲ. ಅಧಿಕಾರ ವಂಚಿತರಾಗಿ ನಿರಾಶಾದಾಯಾಕವಾಗಿ ಮಾತನಾಡ್ತಿದ್ದಾರೆ. ಡಿ.ಕೆ.ರವಿ ಆತ್ಮಹತ್ಯೆಯೋ, ಕೊಲೆಯೋ ಎಂಬ ನಿಜವಾದ ಮಾಹಿತಿ ಇನ್ನು ಹೊರ ಬಂದಿಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸ್ ಮುಚ್ಚಿ ಹಾಕಿದರು. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಬಂಡೆ ಹತ್ಯೆಯಾಯ್ತು. ಇವೆಲ್ಲವನ್ನು ಸಿದ್ದರಾಮಯ್ಯ ಮರೆತು ಬಿಟ್ರಾ? ಸಿದ್ದರಾಮಯ್ಯ ಅಧಿಕಾರವಾಧಿಯಲ್ಲಿ 1000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡದ್ದಾರೆ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವುದಕ್ಕೆ ನೀವು ಏನೇನು ಮಾಡಿದ್ದೀರಿ ಎಂದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪರನ್ನು ಟೀಕೆ ಮಾಡಿದರೆ ಮತ್ತೆ ಸಿಎಂ ಆಗಬಹುದು ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಆದರೆ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ನಿಮಗೆ ದೇವೇಗೌಡರ ಚಾಳಿ ಇರಬಹುದು. ಯಡಿಯೂರಪ್ಪ ಬಂಡೆ ಇದ್ದಂತೆ. ಅವರನ್ನು ನೀವು ಏನು ಮಾಡಲು ಆಗುವುದಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಹೀಗಾಗಿ ತಮ್ಮ ಘನತೆಗೆ ಈ ರೀತಿಯ ಹೇಳಿಕೆ ಶೋಭೆ ತರುವುದಿಲ್ಲ ಎಂದರು.
ರಾಜೀವ್ ಗಾಂಧಿ ಬೆಳೆಸಿದ್ದು ಯಾರನ್ನು:? ಪಿಎಫ್ಐ ಇರಬಹುದು, ಭಯೋತ್ಪಾದಕ, ಉಗ್ರಗಾಮಿಗಳು ಇರಬಹುದು ಅವರನ್ನು ಪೋಷಣೆ ಮಾಡಿದ್ದು ಕೇಂದ್ರದ ಕಾಂಗ್ರೆಸ್ ಸರ್ಕಾರ ಮತ್ತು ಹಿಂದೆ ಇದ್ದ ರಾಜ್ಯದ ಸಿದ್ದರಾಮಯ್ಯ ಸರ್ಕಾರ. ವೋಟ್ ಬ್ಯಾಂಕ್ ರಾಜಕಾರಣಕ್ಕೋಸ್ಕರ ಅವರನ್ನು ಬೆಳೆಸಿದರು. ಅದು ಎಲ್ಲೋ ಒಂದು ಕಡೆ ನಿಮಗೆ ಮಾರಕವಾಯಿತು. ಇದೇ ರಾಜೀವ್ ಗಾಂಧಿ ಯಾರನ್ನು ಬೆಳೆಸಿದರು? ಇಂದಿರಾ ಗಾಂಧಿ ಘಟನೆ ಇವೆಲ್ಲಾ ಕಣ್ಮುಂದೆ ಇವೆ. ಹಾಗಾಗಿ ಬಿಜೆಪಿ ಸರ್ಕಾರ ನಿರ್ದಾಕ್ಷಿಣ್ಯವಾಗಿ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದರು.