ಬೆಂಗಳೂರು: ಸಿನಿಮಾದಿಂದ ಬಂದವರು ಈ ದೇಶದಲ್ಲಿ ಅನೇಕ ಮಂದಿ ಮುಖ್ಯಮಂತ್ರಿ ಆಗಿದ್ದಾರೆ. ಅದೇ ರೀತಿ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ ಎಂಬ ನಂಬಿಕೆ ಇದೆ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು.
ನಿರ್ದೇಶಕ ಹಾಗೂ ನಿರ್ಮಾಪಕ ಎಸ್. ನಾರಾಯಣ್ ನಿರ್ದೇಶನದ '5ಡಿ' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಚಿತ್ರರಂಗದಿಂದ ಬಂದಿರುವ ಎನ್.ಟಿ.ರಾಮರಾವ್, ಎಂ.ಜಿ ರಾಮಚಂದ್ರನ್, ಜಯಲಲಿತಾ, ಕರುಣಾನಿಧಿ ಅವರು ಸಿಎಂ ಆಗಿದ್ದು, ರೊನಾಲ್ಡ್ ರೇಗನ್ ಅಮೆರಿಕಾ ಅಧ್ಯಕ್ಷರಾದರು. ಇದೇ ರೀತಿ ಡಿ.ಕೆ ಶಿವಕುಮಾರ್ ಸಹ ಸಿಎಂ ಆಗಬೇಕು. ಅವರದು ಏನೇ ವ್ಯವಹಾರ ಇದ್ದರೂ, ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದರು.
ಸಿನಿಮಾ ಎಂದರೆ ಅವರಿಗೆ ಬಹಳ ಪ್ರೀತಿ. ನಾನು ಚಲನಚಿತ್ರ ಅಕಾಡೆಮಿ ಮುಖ್ಯಸ್ಥನಾದಾಗ ಬಾಬು ಅವರು ಈ ಹುದ್ದೆಗೆ ಅರ್ಹರು ಎಂದು ಸಿದ್ದರಾಮಯ್ಯನವರಿಗೆ ಡಿಕೆಶಿ ಅವರೇ ಮೊದಲು ಹೇಳಿದ್ದು, ನೀವು ಬೇಗ ಸಿಎಂ ಆದರೆ ಚಿತ್ರರಂಗದ ನಾವೆಲ್ಲರೂ ಸಂತೋಷಪಡುತ್ತೇವೆ. ತಮ್ಮಿಂದ ಚಿತ್ರರಂಗಕ್ಕೆ ಒಳ್ಳೆಯ ಕೆಲಸಗಳು ಆಗುತ್ತವೆ. ಆ ದಿನ ತುಂಬಾ ದೂರ ಇಲ್ಲ. ನಿಮಗೆ ಎಲ್ಲಾ ಯಶಸ್ಸು, ಕರ್ನಾಟಕ ಜನರ ಸೇವೆಗೆ ಅವಕಾಶ ಸಿಗಲಿ ಎಂದು ಬಯಸುತ್ತೇನೆ ಎಂದರು.
![5D Cinema's First Look Release Program](https://etvbharatimages.akamaized.net/etvbharat/prod-images/12426734_thffjpg.jpg)
ಡಿಕೆಶಿ ಸಾಹೇಬರಿಗೆ ಮೂರು ಗುಂಡಿಗೆ:
ಬಳಿಕ ಎಸ್.ನಾರಾಯಣ್ ಮಾತನಾಡಿ, ಚಿತ್ರದ ಮೊದಲ ಶೆಡ್ಯೂಲ್ ಯಶಸ್ವಿಯಾಗಿದ್ದು, ಎರಡನೇ ಶೆಡ್ಯೂಲ್ ಈಗ ಆರಂಭವಾಗಲಿದೆ. ಇಂದು ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಿದ್ದೇವೆ. ಬಹಳಷ್ಟು ಜನರು ಸಿನಿಮಾ ಬಿಡುಗಡೆ ಸಮಾರಂಭಕ್ಕೆ ಡಿಕೆಶಿ ಸಾಹೇಬರನ್ನು ಯಾಕೆ ಕರೆದಿದ್ದೀರಿ ಅಂತಾ ಕೇಳಿದ್ದಾರೆ. ಚಿತ್ರದ ನಾಯಕನಿಗೆ ಎರಡು ಗುಂಡಿಗೆ, ಆತ ಯಾವುದಕ್ಕೂ ಹೆದರುವುದಿಲ್ಲ. ಕಷ್ಟ ಬಂದರೂ ಎಲ್ಲವನ್ನು ಎದುರಿಸುವ ಗುಂಡಿಗೆ ನಾಯಕನಿಗೆ ಇದೆ. ಈ ಚಿತ್ರದ ಮೊದಲ ಲುಕ್ ಬಿಡುಗಡೆಗೆ ಅಂತಹದೆ ಗುಂಡಿಗೆ ಇರುವ ವ್ಯಕ್ತಿಯೇ ಬೇಕಿತ್ತು. ಡಿಕೆಶಿ ಸಾಹೇಬರಿಗೆ ಮೂರು ಗುಂಡಿಗೆ ಇದೆ. ಅದಕ್ಕಾಗಿಯೇ ಅವರನ್ನು ಕರೆದಿದ್ದೇನೆ ಎಂದರು.
ಸಿನಿಮಾರಂಗಕ್ಕೆ ನೆರವಿನ ಅಗತ್ಯವಿದೆ: ಡಿಕೆಶಿ
ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಚಿತ್ರರಂಗ ಕೋವಿಡ್ನಿಂದ ತತ್ತರಿಸಿದ್ದು, ಈ ಸಮಯದಲ್ಲಿ ಚಿತ್ರರಂಗಕ್ಕೆ ಹೆಚ್ಚಿನ ಬೆಂಬಲ, ನೆರವಿನ ಅಗತ್ಯವಿದೆ. ನನಗೆ ಚಿತ್ರರಂಗದ ನೋವಿನ ಸರಿಯಾದ ಪರಿಚಯವಿದೆ. ಏಕೆಂದರೆ ನಾನು ಒಬ್ಬ ಚಿತ್ರ ಪ್ರದರ್ಶಕ. ಮಾಜಿ ಪ್ರಧಾನಿ ಇಂದಿರಾಗಾಂಧಿ ಹೆಸರಿನಲ್ಲಿ ಅನ್ನೋದು ಒಂದು ಚಿತ್ರಮಂದಿರ ಇತ್ತು. ನನ್ನ ಸಾಕಷ್ಟು ಮಂದಿ ಸ್ನೇಹಿತರು ಇಂದಿಗೂ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸಾಕಷ್ಟು ಸಾರಿ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ನನಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಹೋಗಿ ಬಂದಿದ್ದೇನೆ ಎಂದರು.
![5D Cinema's First Look Release Program](https://etvbharatimages.akamaized.net/etvbharat/prod-images/kn-bng-04-dks-cm-talk-script-7208077_11072021190846_1107f_1626010726_1045.jpg)
ಎಸ್. ನಾರಾಯಣ್ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ಬೆಂಗಳೂರಿಗೆ ಬರಿಗೈಲಿ ಬಂದು 50ಕ್ಕೂ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇವರ ಕಾರ್ಯ ಶ್ಲಾಘನೀಯ. ಅನೇಕ ನಾಯಕರನ್ನು ಬೆಳೆಸಿ ಯುವಕರಿಗೆ ಕೆಲಸ ಕೊಟ್ಟಿರುವ ಅವರ ಯಶಸ್ಸಿಗೆ ಶುಭ ಕೋರಲು ನಾನು ಇಲ್ಲಿಗೆ ಆಗಮಿಸಿದ್ದೇನೆ. ಕೋವಿಡ್ನಿಂದ ಚಿತ್ರರಂಗ, ಪ್ರವಾಸೋದ್ಯಮ ಎಲ್ಲವೂ ನೆಲಕಚ್ಚಿವೆ. ಚಿತ್ರಮಂದಿರ ಮಾಲೀಕರಿಂದ ಹಿಡಿದು ಕಲಾವಿದರು, ತಂತ್ರಜ್ಞರು ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಎಲ್ಲರ ಬಡ್ಡಿ ಮೀಟರ್ ಏರುತ್ತಲೇ ಇದೆ. ಎಷ್ಟೋ ಕಲಾವಿದರು, ನಿರ್ಮಾಪಕರು ಬೀದಿಗೆ ಬಿದ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
![S. Narayan and DK Sivakumar](https://etvbharatimages.akamaized.net/etvbharat/prod-images/kn-bng-03-dks-program-script-7208077_11072021190120_1107f_1626010280_754.jpg)
ಮುಖಂಡರ ಭೇಟಿ:
ಈ ಸಮಾರಂಭದ ನಂತರ ನಿವಾಸಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಸಚಿವೆ ಉಮಾಶ್ರೀ, ಶಿವಶಂಕರರೆಡ್ಡಿ (ಹಾಲಿ ಶಾಸಕ), ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್, ಚಿಕ್ಕಬಳ್ಳಾಪುರ ಡಿಸಿಸಿ ಅಧ್ಯಕ್ಷ ಕೇಶವರೆಡ್ಡಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.