ಬೆಂಗಳೂರು: ನಾನು ಈಗಾಗಲೇ ರಾಜ್ಯದ 8 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಇದೆಲ್ಲವನ್ನೂ ಮಾಡುತ್ತಿದ್ದೇನೆ. ರಾಷ್ಟ್ರಮಟ್ಟದಲ್ಲಿ ಜನತಾ ಪರಿವಾರವನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದು, ಪರೋಕ್ಷವಾಗಿ ಜೆಡಿಎಸ್ ಸೇರುವ ಸುಳಿವು ನೀಡಿದ್ದಾರೆ.
ಶಾಸಕರ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಈಗಾಗಲೇ ರಾಜ್ಯದಲ್ಲಿ 8 ಜಿಲ್ಲೆಗಳಿಗೆ ಒಂದು ಸುತ್ತು ಹೋಗಿ ಬಂದಿದ್ದೇನೆ. ಬಿಹಾರ್ಗೆ ಹೋಗಿ ನಿತೀಶ್ ಕುಮಾರ್ ಅವರನ್ನ ಭೇಟಿ ಮಾಡುವೆ. ಕಾಂಗ್ರೆಸ್ ಬಿಡಬೇಕು, ಜನತಾದಳಕ್ಕೆ ಹೋಗಬೇಕು ಅಂತಲ್ಲ, ಆದರೆ ರಾಜ್ಯದ ಜನರಿಗೆ ಒಳ್ಳೆದಾಗಬೇಕು. ಸಂಕ್ರಾಂತಿ ನಂತರ ಮತ್ತೆ ಪ್ರವಾಸ ಮಾಡುತ್ತೇನೆ. ರಾಷ್ಟ್ರ ಮಟ್ಟದಲ್ಲಿ ಜನತಾ ಪರಿವಾರ ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಪ್ರಯತ್ನ ಒಳ್ಳೆಯದಾಗಿದೆ:
ಜನತಾ ಪರಿವಾರ ಒಂದಾಗುತ್ತಾ ಅನ್ನೋ ಪ್ರಶ್ನೆಗೆ, ದೇವರ ಅನುಗ್ರಹದಿಂದ ಈ ಹಿಂದೆ ನಾನು ಮಾಡಿದ್ದು ಒಳ್ಳೆಯದೇ ಆಗಿದೆ. ನಿತೀಶ್, ತೇಜಸ್ವಿ ಮತ್ತು ಶರದ್ ಯಾದವ್ ಅವರನ್ನು ಭೇಟಿ ಮಾಡ್ತೀನಿ. ಇಲ್ಲಿ ನಾಡಗೌಡರ ಜೊತೆಗೂ ಮಾತನಾಡಿದ್ದೇನೆ ಎಂದು ಇಬ್ರಾಹಿಂ ಹೇಳಿದರು.
ಓದಿ: ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರ್ಪಡೆ ವಿಷಯ ಅಚ್ಚರಿಯೇನಲ್ಲ: ವೈಎಸ್ವಿ ದತ್ತಾ
ಯಡಿಯೂರಪ್ಪ ಬರೀ ಕೇಶವ ಕೃಪಾದವರಿಗಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಚೆಲುವಾದಿ ಚೆಲುವೆಯರು, ರಂಡ, ಗಂಡ ಭೇರುಂಡಗಳು ಇದ್ದಾರಲ್ಲ 25 ಜನ ಏನ್ ಮಾಡ್ತಿದ್ದಾರೆ. ಲವ್ ಜಿಹಾದ್ ಬಗ್ಗೆ ಮಾತಾನಾಡುತ್ತಾರೆ. ಯೋಗಿ ಆದಿತ್ಯನಾಥ್ಗೆ ಲವ್ ಅಂದ್ರೆ ಏನು ಅಂತ ಗೊತ್ತಿದ್ಯಾ? ಮದುವೆ ಆಗಿದ್ಯಾ, ಏನಂದ್ರೆ ಏನೂ ಅನುಭವ ಇಲ್ಲ. ಲವ್ ಜಿಹಾದ್ ಬಗ್ಗೆ ಇವರೆಲ್ಲ ಮಾತಾಡುತ್ತಿದ್ದಾರೆ ಎಂದರು.
ಯಡಿಯೂರಪ್ಪ ಟೆಂಟ್ಗೆ ಬೆಂಕಿ:
ಯಡಿಯೂರಪ್ಪ ಟೆಂಟ್ಗೆ ಬೆಂಕಿ ಬಿದ್ದಿದೆ. ಮೋದಿ ಟೆಂಟ್ಗೆ ಬೆಂಕಿ ಬಿದ್ದಿದೆ. ಎಲ್ಲಾ ಒಂದು ದಿನ ಒಂದೊಂದು ಕಡೆ ಓಡಿ ಹೋಗುತ್ತಾರೆ ನೋಡುತ್ತಿರಿ. ನಾನು ಡಿಸೆಂಬರ್ನಲ್ಲಿ ನೋಡರಿ ಅಂತಾ ಹೇಳಿದ್ದೆ. ಮುಂದೆ ನೋಡಿ ಚಡಪಡ ಚಡಪಡ ನೋಡ್ತಾ ಇರಿ. ತೇಜಸ್ವಿ ಯಾದವ್ ಹಾಗೂ ನಿತೀಶ್ ಅವರನ್ನು ಕೂಡ ಭೇಟಿಯಾಗ್ತಿನಿ. ಅವರೆಲ್ಲ ಒಂದಾಗ್ತಾರಾ ಅನ್ನೋ ಪ್ರಶ್ನೆಗೆ ಕಮಾಲ್ ಮಾಡೋ ಹೆಸರೇ ಸಿಎಂ ಇಬ್ರಾಹಿಂ ಎಂದರು.
ದೇವೇಗೌಡರ ಭೇಟಿಯಾಗುತ್ತೇನೆ
ಅಪ್ಪ ಮಕ್ಕಳ ಪಕ್ಷ ಎಂಬ ವಿಚಾರ ಮಾತನಾಡಿ, ನಾವು ರೈತರ ಕೆಲ ಬೀಜ ಉಪಯೋಗಿಸಿಕೊಳ್ತೀವಿ. ದೇವೇಗೌಡರು ಅವರ ಬೀಜ ಉಪಯೋಗಿಸಿಕೊಂಡ್ರೆ ತಪ್ಪೇನು. ದೇವೇಗೌಡರು ಅವರ ಬೀಜವನ್ನ ಉಪಯೋಗಿಸಿಕೊಳ್ಳಬಾರದಾ? ನಾನು ಇಂದು ದೇವೇಗೌಡರನ್ನು ಭೇಟಿಯಾಗ್ತಿನಿ. ಅವರ ಜೊತೆ ಈ ಎಲ್ಲಾ ವಿಚಾರದ ಬಗ್ಗೆ ಮಾತನಾಡ್ತಿನಿ ಎಂದರು.