ಬೆಂಗಳೂರು: ಒಂದು ವೇಳೆ ನೆರೆ ಪರಿಹಾರ ಬರದೆ ಇದ್ದರೆ ನಾವು ಸುಮ್ಮನೆ ಇರಲ್ಲ. ಆದರೆ ಪರಿಹಾರ ಬಂದೇ ಬರುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವ ರಾಜ್ಯಕ್ಕೂ ನೆರೆ ಪರಿಹಾರ ಬಿಡುಗಡೆಯಾಗಿಲ್ಲ. ಹತ್ತು ರಾಜ್ಯಗಳಲ್ಲಿ ನೆರೆ ಸಂಭವಿಸಿದೆ. ಇತ್ತೀಚೆಗೆ ಮಧ್ಯಂತರ ಪರಿಹಾರ ನೀಡುವ ಕ್ರಮ ನಿಲ್ಲಿಸಲಾಗಿದೆ. ಮೂರ್ನಾಲ್ಕು ತಿಂಗಳು ವಿಳಂಬವಾಗುವುದು ಹೊಸದಲ್ಲ. ಆದರೆ ಪ್ಯಾನಿಕ್ ಆಗುವ ವಾತಾವರಣ ನಿರ್ಮಿಸಲಾಗುತ್ತಿದೆ. ಕರ್ನಾಟಕದ ಪಾಲು ಏನಿದೆ ಅದು ಬಂದೇ ಬರುತ್ತದೆ. ಒಂದು ವೇಳೆ ರಾಜ್ಯಕ್ಕೆ ಅನ್ಯಾಯವಾದರೆ ಅದರ ವಿರುದ್ಧ ಧ್ವನಿ ಎತ್ತುವುದರಲ್ಲಿ ನಾನೇ ಮುಂಚೂಣಿಯಲ್ಲಿರುತ್ತೇನೆ ಎಂದು ತಿಳಿಸಿದರು.
ಕೇಂದ್ರ ಗೃಹ ಸಚಿವರ ಜತೆ ಸಭೆ ಆಗಬೇಕು. ಕೇಂದ್ರ ಗೃಹ ಸಚಿವಾಲಯವು ನಮ್ಮ ಅಧಿಕಾರಿಗಳಿಂದ ಮಾಹಿತಿ ಕ್ರೋಢೀಕರಣ ಮಾಡುತ್ತಿದೆ. ಇಷ್ಟರಲ್ಲೇ ಘೋಷಣೆ ಆಗುತ್ತದೆ. ಕಳೆದ ಹತ್ತು ವರ್ಷದಲ್ಲಿ ಕೇಂದ್ರದಿಂದ ಅನುದಾನ ಬಿಡುಗಡೆಯ ಮಾಹಿತಿ ತೆಗೆಸುತ್ತಿದ್ದೇನೆ. ನಂತರ ಉತ್ತರ ಕೊಡುತ್ತೇನೆ ಎಂದು ವಿವರಿಸಿದರು.
ನಮ್ಮ ಸರ್ಕಾರ ತುರ್ತು ಪರಿಸ್ಥಿತಿಯ ಸರ್ಕಾರ ಅಲ್ಲ. ಟೀಕೆ ಬೇಡ ಅನ್ನಲ್ಲ. ಅವಹೇಳನವೇ ಬೇರೆ, ಟೀಕೆಯೇ ಬೇರೆ. ನಿನ್ನೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನವರು ಮೋದಿಯವರ ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸಿ.ಎಂ.ಇಬ್ರಾಹಿಂ ಒಬ್ಬ ಪೊಲಿಟಿಕಲ್ ಜೋಕರ್:
ಸಿ.ಎಂ.ಇಬ್ರಾಹಿಂ ಒಬ್ಬ ಪೊಲಿಟಿಕಲ್ ಜೋಕರ್ ಎಂದು ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ನೆರೆ ಪರಿಹಾರ ತರಿಸಲಾಗದ ಬಿಜೆಪಿಯವರು ನಪುಂಸಕರು ಎಂಬ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಹಾವಭಾವ ಅದಕ್ಕೆ ತಕ್ಕಂತೆ ಇದೆ. ಅಂತಹವರ ಹೇಳಿಕೆಗಳಿಗೆ ಪ್ರತಿಕ್ರಯಿಸುವುದು ಸೂಕ್ತವಲ್ಲ. ಅವರೊಬ್ಬ ರಂಜನೀಯವಾಗಿ ಮಾತನಾಡುವ ರಾಜಕೀಯ ವಿದೂಶಕ ಎಂದು ಕಿಡಿಕಾರಿದರು.
ಅವರು ಇಂದಿರಾ ಗಾಂಧಿಯವರ ಬಗ್ಗೆ ಏನು ಹೇಳಿದ್ದರು ಎಂಬುದನ್ನು ನನ್ನ ಬಾಯಲ್ಲಿ ಹೇಳಲಾರೆ. ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ನಾಯಕರ ಬಗ್ಗೆ ಅವರ ಪ್ರೀತಿ, ದ್ವೇಷ ಎರಡನ್ನೂ ನಾನು ನೋಡಿದ್ದೇನೆ ಎಂದು ತಿರುಗೇಟು ನೀಡಿದರು.