ಬೆಂಗಳೂರು : ನಾನು ಸಿರಿಧಾನ್ಯದ ರಾಯಭಾರಿ. ಕಳೆದ 30 ವರ್ಷದಿಂದ ಸಿರಿಧಾನ್ಯ ಬಳಕೆ ಮಾಡುತ್ತಿದ್ದೇನೆ. ನಮ್ಮ ಸರ್ಕಾರವೂ ಸಿರಿಧಾನ್ಯ ಕೃಷಿಗೆ ಅಗತ್ಯ ಸಹಕಾರ ನೀಡುತ್ತಿದ್ದು, ಮುಂದೆಯೂ ಅಗತ್ಯ ಸಹಕಾರ ಮುಂದುವರೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯುವ ಮೇಳಕ್ಕೆ ಸಿರಿಧಾನ್ಯವನ್ನು ಒನಕೆಯಲ್ಲಿ ಕುಟ್ಟುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ಬಳಿಕ ವೇದಿಕೆ ಮೇಲೆ ಇದ್ದ ಎಲ್ಲಾ ಗಣ್ಯರು ಸಹ ಒನಕೆಯಲ್ಲಿ ಸಿರಿಧಾನ್ಯವನ್ನು ಕುಟ್ಟಿದರು. ಇದಕ್ಕೆ ತಮ್ಮ ಭಾಷಣದ ಆರಂಭದಲ್ಲಿ ತಮಾಷೆ ಮಾಡಿದ ಸಿಎಂ ಎಲ್ಲರೂ ಒಮ್ಮೆ ಕುಟ್ಟಿದರೆ ಹೀಗೆ ಆಗುತ್ತದೆ ನೋಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸಿಎಂ ಹೇಳಿಕೆಗೆ ಮೇಳದಲ್ಲಿ ಭಾಗವಹಿಸಿದವರೆಲ್ಲ ಕೆಲಕಾಲ ನಗೆಗಡಲಲ್ಲಿ ತೇಲಿದರು.
ನಂತರ ಉದ್ಘಾಟನಾ ಭಾಷಣ ಮಾಡಿದ ಸಿಎಂ ಸಾವಯುವ ಧಾನ್ಯ ಬಳಸಿ ಆರೋಗ್ಯವಂತರಾಗಿ ಎಂದು ಸಾವಯುವ ಮೇಳದ ಮೂಲಕ ಕರೆ ನೀಡಿದರು. ಸಿಎಂ ನಾನು ಸಿರಿ ಧಾನ್ಯದ ರಾಯಬಾರಿ, ನಾನು 30 ವರ್ಷದಿಂದ ಅನ್ನವನ್ನು ಸೇವಿಸುತ್ತಿಲ್ಲ, ಬದಲಿಗೆ ಸಿರಿಧಾನ್ಯವನ್ನು ಸೇವಿಸುತ್ತಿದ್ದೇನೆ ಎಮದು ತಮ್ಮ ಆಹಾರ ಪದ್ದತಿ ತಿಳಿಸಿದರು. ಸಿರಿಧಾನ್ಯದಲ್ಲಿ ಪೌಷ್ಟಿಕ ಅಂಶಗಳಿವೆ, ಸಿರಿ ಧಾನ್ಯ ಬೆಳೆಯಲು ನಮ್ಮ ಸರ್ಕಾರ ಎಲ್ಲ ಸಹಕಾರ ಕೊಡುತ್ತಿದೆ ಎಂದರು.
ಕಳೆದ ಮೂರು ವರ್ಷದಿಂದ ಅಕ್ಕಿಯ ಜೊತೆ ರಾಗಿ, ಜೋಳವನ್ನು ಪಡಿತರ ವ್ಯವಸ್ಥೆಯಲ್ಲಿ ಕೊಡುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳಿಗೆ ದೊಡ್ಡ ಬೇಡಿಕೆ ಇದ್ದು, ಅದಕ್ಕೆ ಬೇಕಾದ ಮಾರುಕಟ್ಟೆ, ಪ್ಯಾಕೇಜಿಂಗ್ ಗೆ ನಮ್ಮಲ್ಲಿ ಉತ್ತಮ ವ್ಯವಸ್ಥೆ ಇದೆ. ಸಿರಿಧಾನ್ಯ ಬೆಳೆ ವಿಸ್ತರಣೆಗೆ ಕೇಂದ್ರದಿಂದ ಅನುದಾನ ಜೊತೆಗೆ ಪ್ರೋತ್ಸಾಹವೂ ಸಿಗುತ್ತಿದೆ ಎಂದರು. ಬೇರೆ ದೇಶದಲ್ಲಿ ಹಿಂದಿನ ಹತ್ತು ವರ್ಷ ಮಳೆ, ಬೆಳೆ ಎಲ್ಲಾ ಆಧರಿಸಿ ಮುಂದಿನ ವರ್ಷದ ಬೆಳೆಗೆ ದರ ನಿರ್ಧಾರ ಆಗುತ್ತದೆ. ಹೀಗಾಗಿ ನಮ್ಮಲ್ಲೂ ಬೆಳೆಗಳ ಔಟ್ ಲುಕ್ ರಿಪೋರ್ಟ್ ರೆಡಿ ಆಗಬೇಕು. ಕೃಷಿ ಅಧಿಕಾರಿಗಳು ರಿಪೋರ್ಟ್ ರೆಡಿ ಮಾಡಿ ಎಂದು ಸೂಚಿಸಿದರು.
ಮುಂದೆ ಕೃಷಿಕರು ಬೆಳೆಗೆ ಎಷ್ಟು ಖರ್ಚು ಮಾಡಬೇಕು, ಎಷ್ಟು ಖರ್ಚು ಮಾಡಿದರೆ ಲಾಭ ಬರುತ್ತದೆ ಎಂದು ರೈತರಿಗೆ ಗೊತ್ತಾಗಬೇಕು. ಇದು ಆದಲ್ಲಿ ರೈತರಿಗೆ ಅನಿಶ್ಚಿತತೆ ಹೋಗಿತ್ತದೆ ಎಮದು ಸಿಎಂ ಹೇಳಿದರು. ರೈತಶಕ್ತಿ ಯೋಜನೆಯನ್ನು 10 ದಿನದಲ್ಲಿ ಆರಂಭಿಸುತ್ತೇವೆ, ರಾಜ್ಯದಲ್ಲಿ ಹೆಚ್ಚುವರಿ ಇಂಧನವಿದ್ದು, ಸೋಲಾರ್ ಕೃಷಿ ಪಂಪ್ ಗೆ ಬೆಂಬಲ ನೀಡಿದ್ದೇವೆ. ಹಾಗೂ ರಾಜ್ಯದಲ್ಲಿ 11 ಲಕ್ಷ ರೈತರ ಮಕ್ಕಳು ರೈತ ವಿದ್ಯಾನಿಧಿಯ ಲಾಭವನ್ನು ಪಡೆದಿದ್ದಾರೆ ಎಂದು ಹೇಳಿದರು.
ಈಟ್ ಮಿಲೆಟ್ ಸೇವ್ ಲೈಫ್ ಪರ್ ಪ್ಲಾನೆಟ್: ಈಟ್ ಮಿಲೆಟ್ ಸೇವ್ ಲೈಫ್ ಪರ್ ಪ್ಲಾನೆಟ್ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲರು ಕರೆ ನೀಡಿದ್ದು, ಸಿರಿಧಾನ್ಯ ಬಳಕೆ ಉತ್ತಮ ಆರೋಗ್ಯ ಜೀವನಕ್ಕೆ, ಆರೋಗ್ಯ ಜೀವನ ಶೈಲಿಗೆ ಭವಿಷ್ಯದ ಆಹಾರವೆಂದು ಪ್ರತಿಪಾದಿಸಿದರು. ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ರಾಶಿಪೂಜೆ ಟೇಪ್ ಕತ್ತರಿಸುವ ಮೂಲಕ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಪ್ರಮುಖ ಸಚಿವರೊಡನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕ ಸರ್ಕಾರ ಕೃಷಿ ಇಲಾಖೆ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ದೀನದಲಿತರ ಬಡವರಪರ ಕಾಳಜಿಯುಳ್ಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರದ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಮೂರು ದಿನ ಸಿರಿಧಾನ್ಯ ಮೇಳ ಹಮ್ಮಿಕೊಂಡಿದೆ. ಬಹಳ ಸಂತಸದಿಂದ ಈ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಉದ್ಘಾಟನೆಯಾಗಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರದ ಪ್ತಸ್ತಾವನೆಯ ಮೇರೆಗೆ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯ ಮೇಳ ಕರ್ನಾಟಕದಲ್ಲಿ ನಡೆಯಲು ಪ್ರೋತ್ಸಾಹಿಸಿದ್ದಕ್ಕೆ ಬಿ.ಸಿ.ಪಾಟೀಲರು ಧನ್ಯವಾದ ತಿಳಿಸಿದರು.
ಹಿಂದೆ ಸಿರಿಧಾನ್ಯವೆಂದರೆ ಬಡವರ ಆಹಾರವೆಂದಾಗಿತ್ತು. ಈಗ ಸಿರಿಧಾನ್ಯವೆನ್ನುವುದು ಸಿರಿವಂತರ ಆಹಾರವಾಗಿದೆ. ಇದಕ್ಕೆ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿರುವುದು ಪ್ರಮುಖ ಕಾರಣವಾಗಿದೆ. ಹಾಗೂ ಸಿರಿಧಾನ್ಯ ತಿಂದವರು ಬುಲೇಟ್‌ನಂತೆ ಶಕ್ತಿವಂತರಾಗುತ್ತಾರೆ ಎಂದು ಸಿರಿ ಧಾನ್ಯಗಳಿಗೆ ಇರುವ ಮಹತ್ವವನ್ನು ತಿಳಿಸಿದರು.
ಸಿರಿಧಾನ್ಯ ಪ್ರತಿ ಹೆಕ್ಟೇರ್‌ಗೆ 10 ಸಾವಿರ ಪ್ರೋತ್ಸಾಹ ಧನ ಸಿರಿಧಾನ್ಯ ರೈತರಿಗೆ ನೀಡಲಾಗುತ್ತಿದೆ. ಸಿರಿಧಾನ್ಯ ಬಳಕೆ ಹೆಚ್ಚುತ್ತಿದ್ದು ಒಂದು ಕಾಲದಲ್ಲಿ ಫುಡ್ ಸೆಕ್ಯೂರಿಟಿ ಬಗ್ಗೆ ಗಮನಕೊಡುತ್ತಿದ್ದೆವು. ಈಗ ನ್ಯೂಟ್ರಿಷಿಯನ್ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಇದರೊಂದಿಗೆ ಕೇಂದ್ರವು ಸೇರಿದಂತೆ ರಾಜ್ಯ ಸರ್ಕಾರ ಜನರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿವೆ ಎಂದು ಬಿ.ಸಿ ಪಾಟೀಲ್ ಹೇಳಿದರು.
ಪ್ರಸಕ್ತ 80 ಹೊಟೇಲ್‌ಗಳಲ್ಲಿ ಸಿರಿಧಾನ್ಯ ಪೂರೈಕೆ ಬೆಂಗಳೂರಿನಲ್ಲಿ ಆಗುತ್ತಿದೆ. ರೈತ ಮಕ್ಕಳ ರಿಸರ್ವೇಶನ್ ವಿಶ್ವವಿದ್ಯಾಲಯದಲ್ಲಿ ಏರಿಕೆಯಾಗಿದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೊದಲ ದಿನವೇ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿ ಇಡೀ ದೇಶಕ್ಕೆ ಮಾದರಿ ಸಿಎಂ ಆಗಿದ್ದಾರೆ. ಈ ರೈತ ವಿದ್ಯಾನಿಧಿ ಯೋಜನೆ ರೈತಕಾರ್ಮಿಕ ಮಕ್ಕಳಿಗೂ ವಿಸ್ತರಿಸಲಾಗಿದೆ ಎಂದರು.
ಇದನ್ನೂ ಓದಿ :ನಾಳೆಯಿಂದ ಮೂರು ದಿನ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ದೇಶ ವಿದೇಶದ ಸಿರಿಧಾನ್ಯ ಸಂಸ್ಥೆಗಳು ಭಾಗಿ..!