ಬೆಂಗಳೂರು: ನಾನು ನನ್ನ ಜೀವಮಾನದಲ್ಲಿ ಯಾವುದೇ ಸಿಡಿ ಮಾಡಿಸುವುದಕ್ಕೆ ಹೋಗಿಲ್ಲವೆಂದು ಸಚಿವ ನಾರಾಯಣ ಗೌಡ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಜೆಡಿಎಸ್ ಶಾಸಕ ಸುರೇಶ್ ಗೌಡರ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಇದು ಕಟ್ಟು ಕಥೆ, ನಾನು ಸಿಡಿ ಬಗ್ಗೆ ಮಾತಾಡಿಲ್ಲ. ದಯವಿಟ್ಟು ಏಕ ವಚನದಲ್ಲಿ ಮಾತಾಡಬೇಡಿ. ನಾನು ಸಿಡಿ ಬಗ್ಗೆ ಮಾತಾಡಿಲ್ಲ ಎಂದರು.
ನನ್ನ ಬಳಿ ಯಾವ ಸಿಡಿಯೂ ಇಲ್ಲ, ನಾನು ಸಿಡಿ ವಿಚಾರವನ್ನು ಖಂಡಿತ ಮಾತನಾಡಿಲ್ಲ. ನನ್ನ ಸಂಪೂರ್ಣ ವಿಚಾರ ಸುರೇಶ್ ಗೌಡರಿಗೆ ಗೊತ್ತು. ಅವರ ಸಂಪೂರ್ಣ ವಿಚಾರ ನನಗೂ ಗೊತ್ತು. ನಾವೆಲ್ಲಾ ಒಟ್ಟಿಗೆ ಬೆಳೆದವರು ಎಂದು ವಿವರಿಸಿದರು.
ನಾನು ನನ್ನ ಊರಿಗೆ ಹೋಗಬೇಕಾದ್ರೆ ಮಂಡ್ಯ ಮೇಲೆನೇ ಹೋಗಬೇಕು. ನನ್ನ ಗಾಡಿ ಹಿಂದೆ ಮುಂದೆ ಯಾವ ವಾಹನಗಳೂ ಇರಲ್ಲ. ನಾನು ನನ್ನ ಗಾಡಿಗೆ ಸೈರನ್ ಕೂಡ ಆನ್ ಮಾಡುವುದಿಲ್ಲ ಎಂದು ತಿಳಿಸಿದರು. ಈ ಸ್ಥಾನಕ್ಕೆ ಬರಬೇಕು ಅಂದ್ರೆ ಮಹಾರಾಷ್ಟ್ರದಲ್ಲಿ 3-4 ದಿನಗಳಲ್ಲಿ ನಿದ್ದೆ ಗೆಟ್ಟು ಕೆಲಸ ಮಾಡಿದ್ದೇನೆ. ನನಗೆ ಎಷ್ಟೇ ತೊಂದರೆ ಕೊಡಲಿ ನಾನು ಹೆದರುವುದಿಲ್ಲ. ಸಿಎಂ ಭೇಟಿ ಮಾಡಿಸಿ ಅನುದಾನ ಕೊಡಿಸಿ ಎಂದು ಕೇಳುತ್ತಾರೆ.
ನಾನು ಬಿಜೆಪಿಯಿಂದ ಗೆದ್ದಿರುವುದು ಅವರಿಗೆ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ನನ್ನ ಜೊತೆಗೆ ಎಲ್ಲಾ ಚೆನ್ನಾಗಿ ಇದ್ದಾರೆ. ಆದರೆ ಮೀಡಿಯಾ ಮುಂದೆ ಯಾಕೆ ಹಾಗೆ ಮಾತಾಡುತ್ತಾರೋ ಗೊತ್ತಿಲ್ಲ. ಮಂಡ್ಯದಲ್ಲಿ ಬಿಜೆಪಿ ಗೆದ್ದಿದೆ ಅಂತ ಹಾಗೆ ಮಾಡುತ್ತಿರಬೇಕು ಎಂದು ಸಚಿವ ನಾರಾಯಣ ಗೌಡ ಅಭಿಪ್ರಾಯಪಟ್ಟರು.