ಬೆಂಗಳೂರು: ನಾನು ಯಾರಿಗೂ ಚೇಲ ಅಲ್ಲ, ಯಾರಿಗೂ ಬಕೆಟ್ ಹಿಡಿದಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಸ್ ಟಿ ಸೋಮಶೇಖರ್ಗೆ ತಿರುಗೇಟು ನಿಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಚೇಲ ಎಂಬ ಎಸ್ ಟಿ ಸೋಮಶೇಖರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಸಿದ್ದರಾಮಯ್ಯ ಪರನೂ ಇಲ್ಲ. ಪರಮೇಶ್ವರ್ ಪರನೂ ಇಲ್ಲ. ಡಿ.ಕೆ ಶಿವಕುಮಾರ್ ಪರನೂ ಇಲ್ಲ, ಬಕೆಟ್ ಕೂಡ ಹಿಡಿದಿಲ್ಲ. ಯಾರ ಮನೆಯ ಬಾಗಿಲನ್ನೂ ಕಾದಿಲ್ಲ. ನಾನು ಇರುವುದು ಕಾಂಗ್ರೆಸ್ ಪಕ್ಷದ ಪರ ಎಂದು ಸ್ಪಷ್ಟಪಡಿಸಿದರು.
ಅವರಿಗೆ ಹೇಳಲು ಏನು ಇಲ್ಲ. ಅವರು ಹತಾಶೆಯಿಂದ ಈ ರೀತಿ ಮಾತಾಡ್ತಿದ್ದಾರೆ. ನಾನು ಯಾರ ಹೆಸರನ್ನು ಕೂಡ ಉಲ್ಲೇಖಿಸಿಲ್ಲ. ಅವರು ಯಾರ ಜೊತೆ ಇದ್ದಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಬಹಳ ವಿಚಲಿತರಾಗಿ, ಹತಾಶರಾಗಿದ್ದಾರೆ. ಹಾಗಾಗಿ ಅವರು ವಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ ಅಷ್ಟೇ ಎಂದು ಹರಿಹಾಯ್ದರು.
ಪಕ್ಷಗಳಲ್ಲಿ ಬಣಗಳು ಇರುವುದು ಸಹಜ. ದೊಡ್ಡ ಬಣ, ಸಣ್ಣ ಬಣ, ಒನ್ ಮೆನ್ ಆರ್ಮಿನೂ ಇರ್ತಾರೆ ಎಂದು ಪಕ್ಷದ ಆಂತರಿಕ ವಿಷಯದ ಬಗ್ಗೆ ಸೂಚ್ಯವಾಗಿ ನುಡಿದ ಅವರು, ಫೋನ್ ಟ್ಯಾಪಿಂಗ್ ಪ್ರಕರಣ ತನಿಖೆಗೆ ಹೋಗಿದೆ. ಇದು ನಿಷ್ಪಕ್ಷಪಾತವಾಗಿ ತನಿಖೆ ಆಗಲ್ಲ ಅಂತ ಗೊತ್ತಿದೆ. ಕೇಂದ್ರ ಸರ್ಕಾರ ಎಲ್ಲಾ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರ ತಮ್ಮ ಸ್ವಾರ್ಥಕ್ಕೆ ಫೋನ್ ಟ್ಯಾಪಿಂಗ್ಅನ್ನು ಕೂಡ ಬಳಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಚುನಾವಣಾ ಆಯೋಗ ಬಿಜೆಪಿ ಏಜೆಂಟ್ :
ಉಪಚುನಾವಣೆ ಮುಂದೂಡಿದ ಕೇಂದ್ರ ಚುನಾವಣಾ ಆಯೋಗದ ಮೇಲೆ ನಂಬಿಕೆ ಹೋಗಿದ್ದು, ಅದು ಬಿಜೆಪಿ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ. ಸಂವಿಧಾನಾತ್ಮಕ ಸ್ವಾಯತ್ತತೆಯನ್ನ ಚುನಾವಣಾ ಆಯೋಗ ಕಳೆದುಕೊಂಡಿದೆ. ಯಾವುದೇ ಸಕಾರಣಗಳಿಲ್ಲದೇ ಚುನಾವಣೆ ಮುಂದೂಡಿರುವುದು ಸರಿಯಲ್ಲ. ಚುನಾವಣೆ ಮುಂದೂಡುವುದಕ್ಕೆ ಕಾರಣ ಹೇಳಿ. ನಮ್ಮ ಸಂಶಯ ಬಗೆಹರಿಸಿ. ಸುಪ್ರೀಂ ಕೋರ್ಟ್ ತಡೆ ಕೊಡದೇ ಚುನಾವಣಾ ಮುಂದೂಡಿದ್ದು ಯಾಕೆ? ನಾಮಪತ್ರ ಸಲ್ಲಿಕೆ ಮಾಡಿದವರ ಪರಿಸ್ಥಿತಿ ಏನು? ಚುನಾವಣಾ ಆಯೋಗ ಒಂದು ಪಕ್ಷದ ಸಂಸ್ಥೆ ಅನ್ನೋ ರೀತಿ ವರ್ತನೆ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿ ಕಾರಿದರು.