ಬೆಂಗಳೂರು : ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ನಾನು ಆಕಾಂಕ್ಷಿ ಅಲ್ಲವೆಂದು ಹಲವು ಬಾರಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿರುವ ಕೋಲಾರ ಜಿಲ್ಲೆಯ ಮುಖಂಡರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಇಂದು ಒಂದು ರೀತಿ ಮಾತನಾಡಿ, ಮತ್ತೊಂದು ದಿನ ಬೇರೆ ಮಾತನಾಡುವ ವ್ಯಕ್ತಿತ್ವ ನನ್ನದಲ್ಲ. ನಾಳೆ ಮಂಡ್ಯ ಜಿಲ್ಲೆಯ ಸಭೆಯನ್ನು ಮಾಡ್ತಿದ್ದೇವೆ. ಯಾರು ಸ್ಪರ್ಧೆ ಮಾಡಬೇಕೆಂದು ಅಲ್ಲಿ ಚರ್ಚೆಯಾಗುತ್ತದೆ ಎಂದರು. ಮಂಡ್ಯದಲ್ಲಿ ಯಾರು ನಿಲ್ಲಬೇಕೆಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ನಾಯಕರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬರುತ್ತಿದೆ. ಇವತ್ತು ಕೋಲಾರ ಕ್ಷೇತ್ರದ ಚುನಾವಣೆ ಸಿದ್ಧತೆ ಬಗ್ಗೆ ಶಾಸಕರು, ಮಾಜಿ ಶಾಸಕರು ಮುಖಂಡರ ಜೊತೆ ಸಭೆ ನಡೆಸುತ್ತಿದ್ದೇವೆ. ಕೋಲಾರ ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳ ಆಯ್ಕೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಇದೇ ವಿಷಯಕ್ಕೆ ಇಂದು ಸಭೆ ಕರೆದಿರುವುದು. ಇವತ್ತು ಸಂಭಾವ್ಯ ಅಭ್ಯರ್ಥಿಗಳು ಯಾರಾಗಬೇಕೆಂದು ತಿಳಿಯಲು ಅಲ್ಲಿನ ಮುಖಂಡರ ಸಭೆ ಕರೆದಿದ್ದೇವೆ. ಜೊತೆಗೆ ಅಲ್ಲಿನ ಜನತೆ ಅಭಿಪ್ರಾಯ ಹಾಗೂ ಗ್ರೌಂಡ್ ರಿಯಾಲಿಟಿ ಬಗ್ಗೆ ಪಕ್ಷ ಮಾಹಿತಿ ಕಲೆಹಾಕುತ್ತದೆ ಎಂದು ಹೇಳಿದರು.
ಒಳ್ಳೆ ಉದ್ಧೇಶದಿಂದ ಎನ್ಡಿಎ ಜೊತೆಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡರಿಗೆ ಕೊಡುವ ಗೌರವವನ್ನು ನಾವೆಲ್ಲಾ ಕಂಡಿದ್ದೇವೆ. ನಮ್ಮನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದಾರೆ. ಹಾಗಾಗಿ ಒಳ್ಳೆ ಉದ್ದೇಶದಿಂದ ಕೈ ಜೋಡಿಸಿದ್ದೇವೆ. 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಅಣ್ಣತಮ್ಮಂದಿರಂತೆ ದುಡಿದು ಗೆಲ್ಲಬೇಕು ಎಂದರು.
ಜೆಡಿಎಸ್ಗೆ ಎಷ್ಟು ಕ್ಷೇತ್ರ ಸಿಗಲಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಈ ತಿಂಗಳು ಕುಮಾರಸ್ವಾಮಿ ಹಾಗೂ ನಮ್ಮ ನಾಯಕರು ದೆಹಲಿಗೆ ಹೋಗ್ತಾರೆ. ಅದಕ್ಕೆ ಒಂದು ದಿನಾಂಕ ನಿಗದಿಯಾಗುತ್ತದೆ. ಅತಿ ಶೀಘ್ರದಲ್ಲಿ ನಿಮ್ಮೆಲ್ಲರಿಗೂ ಸಿಹಿ ಸುದ್ದಿಕೊಡುತ್ತೇವೆ ಎಂದು ಹೇಳಿದರು. ಮಂಡ್ಯ ಲೋಕಸಭಾ ಸ್ಥಾನವನ್ನು ಜೆಡಿಎಸ್ ಪಡೆದುಕೊಳ್ಳುವುದು ಮುಖ್ಯ. ಬಳಿಕ ಮುಂದಿನ ದಿನಗಳಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎಂದು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಡ್ತಿರಾ ಎಂಬ ಪ್ರಶ್ನೆಗೆ, ಜನವರಿ 22ರಂದು ಕಾಕತಾಳಿಯವೋ ಏನೋ ಗೊತ್ತಿಲ್ಲಾ, ನನ್ನ ಹುಟ್ಟಹಬ್ಬದ ದಿನದಂದೇ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕಿಂತ ಖುಷಿಯ ವಿಚಾರ ಇನ್ನೊಂದಿಲ್ಲ. ಪ್ರತಿಯೊಬ್ಬ ಭಾರತೀಯನಿಗೂ ಐತಿಹಾಸಿಕ ಕ್ಷಣ. ಹಾಗಾಗಿ, ಕೆಲವೊಂದು ಕಾರ್ಯಕ್ರಮಗಳ ಮೂಲಕ ಸೇವೆ ಮಾಡಬೇಕೆಂದು ಅಂದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಇದನ್ನೂ ಓದಿ : ಕೇಂದ್ರದಿಂದ ದುರುದ್ದೇಶವಿಲ್ಲ; ರಾಜ್ಯದ ಟ್ಯಾಬ್ಲೋ ಕೈಬಿಟ್ಟದ್ದನ್ನು ಸಮರ್ಥಿಸಿಕೊಂಡ ಬಿ ವೈ ವಿಜಯೇಂದ್ರ