ಆನೇಕಲ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ, ಬಳಿಕ ತಾನೂ ಕೂಡ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ತಾಲೂಕಿನ ಯಡವನಹಳ್ಳಿಯಲ್ಲಿ ಇಂದು ಬೆಳ್ಳಂಬೆಳ್ಳಗ್ಗೆ ನಡೆದಿದೆ. ಇದೇ ವೇಳೆ ಅಡ್ಡಬಂದ ಮಗನಿಗೂ ಕೂಡ ವ್ಯಕ್ತಿಯು ಚಾಕುವಿನಿಂದ ಇರಿದಿದ್ದಾನೆ.
ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬೆಳ್ಳಂಬೆಳಗ್ಗೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಮನೆಯಲ್ಲಿ ಮಲಗಿದ್ದಾಗ ಪತ್ನಿ ಲಾವಣ್ಯ (30) ಳನ್ನು ಪತಿ ಸಂಪತ್ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಆಗ ಅಡ್ಡ ಬಂದ ಮಗನಿಗೂ ಚಾಕುವಿನಿಂದ ಇರಿದಿದ್ದು, 10 ವರ್ಷದ ಬಾಲಕ ಬಾರ್ಗವ್ ಕೈಗೆ ಗಾಯವಾಗಿದೆ.
ಪತ್ನಿ ಕೊಂದ ಬಳಿಕ ಸಂಪತ್ ತಾನೂ ಕತ್ತು ಕುಯ್ದುಕೊಂಡು ಮನೆಯ ಮೊದಲನೇ ಮಹಡಿಯಿಂದ ಹೊರಗೆ ಓಡಿ ಬಂದಿದ್ದಾನೆ. ಮನೆಯ ಎದುರಿನ ಚರಂಡಿ ಬಳಿ ಬಿದ್ದು ಒದ್ದಾಡುತ್ತಿದ್ದ ಸಂಪತ್ನನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯವಾಗಿರುವುದರಿಂದ ಆತ ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಕಾರಣ?:ಕಳೆದ ಕೆಲ ದಿನಗಳಿಂದ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಸಂಪತ್ ದಿನನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ನಿನ್ನೆ ಲಾವಣ್ಯಳ ತವರು ಮನೆಯವರು ಬಂದು ರಾಜಿ ಪಂಚಾಯಿತಿ ಮಾಡಿದ್ದರು. ಕುಡಿತದ ವಿಚಾರಕ್ಕೆ ಇಂದೂ ಕೂಡ ಜಗಳ ನಡೆದಿರುವ ಸಾಧ್ಯತೆ ಇದ್ದು, ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ.
ಸಂಪತ್ ಹಾಗೂ ಲಾವಣ್ಯ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಎಂ. ಮಲ್ಲೇಶ್, ಪೊಲೀಸ್ ಇನ್ಸ್ಪೆಕ್ಟರ್ ಕೆ. ವಿಶ್ವನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ವೀರಶೈವ ಸಂಪ್ರದಾಯದಂತೆ ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ: ಸಂಬಂಧಿಕರ ಆಕ್ರಂದನ