ಬೆಂಗಳೂರು: ವರದಕ್ಷಿಣೆಗಾಗಿ ಗಂಡನೇ ಹೆಂಡತಿಯ ಕೈ ಕಾಲು ಕಟ್ಟಿ ಮುಖದ ಮೇಲೆ ಮೂತ್ರ ವಸರ್ಜನೆ ಮಾಡಿ ವಿಕೃತಿ ಮೆರೆದು ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ ಎಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅನಿಲ್ ಕುಮಾರ್ ಹಾಗೂ ಆತನ ಮನೆಯವರ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಸಂಪ್ರದಾಯಬದ್ಧವಾಗಿ ಅನಿಲ್ ಕುಮಾರ್ನೊಂದಿಗೆ ಬೆಂಗಳೂರಿನಲ್ಲಿ ಮದುವೆಯಾಗಿತ್ತು. ಆದರೆ ಅನಿಲ್ ಆರಂಭದಿಂದಲೂ ವರದಕ್ಷಿಣೆಗಾಗಿ ಹಪಹಪಿಸುತ್ತಿದ್ದ. ಇದಕ್ಕೆ ಆಕೆ ತಾಯಿ ಶಿವಲಿಂಗಮ್ಮ ಹಾಗೂ ತಂಗಿ ಲಕ್ಷ್ಮೀ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ದೂರಿದ್ದಾಳೆ.

ಅಲ್ಲದೆ ಈ ಸಂಬಂಧ ಮಹಿಳೆ ಅಣ್ಣ ಸಹ ಗಂಡನ ಮನೆಯವರೊಂದಿಗೆ ಮಾತನಾಡಿ ಒಂದು ಲಕ್ಷ ರೂ. ವರದಕ್ಷಿಣೆ ನೀಡಿದ್ದರು. ಆದರೂ ಸಮಾಧಾನಗೊಳ್ಳದ ಆರೋಪಿ ಅನಿಲ್ ನನಗೆ ನಿನ್ನ ಮೇಲೆ ಪ್ರೀತಿಯಿಲ್ಲ. ಬೇರೆಯವರೊಂದಿಗೆ ಸರಸವಾಡು. ನಿನಗೆ ವಿಚ್ಛೇದನ ನೀಡುತ್ತೇನೆ ಎಂದು ಹೇಳಿದ್ದನಂತೆ. ಇದಾದ ಕೆಲ ದಿನಗಳ ಬಳಿಕ ಮತ್ತೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹೇಳುವುದಲ್ಲದೆ, ಕೈ ಕಾಲು ಕಟ್ಟಿ ಆಕೆಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವರದಕ್ಷಿಣೆಗೆಗಾಗಿ ಪತ್ನಿಗೆ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ.
ಪೀಣ್ಯದ ಇ.ಎಸ್.ಐ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಆರೋಪಿಯು ನಂದಿನಿ ಲೇಔಟ್ನ ರಾಮಣ್ಣ ಬ್ಲಾಕ್ನಲ್ಲಿ ವಾಸ ಮಾಡುತ್ತಿದ್ದ. ಸದ್ಯ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರೆಸಿ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆರೋಪಿಗಳ ವಿರುದ್ಧ 498 (A) ವರದಕ್ಷಿಣೆ ಕಿರುಕುಳ ಹಾಗೂ 354 ಲೈಂಗಿಕ ಕಿರುಕುಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.