ಬೆಂಗಳೂರು: ಪಾರ್ಟಿಗಳಲ್ಲಿ ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುವಂತೆ ಗಂಡ ಒತ್ತಾಯಿಸಿದ್ದಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಶರಣಾಗಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
![bengaluru techie bhaskar wife suicide case](https://etvbharatimages.akamaized.net/etvbharat/prod-images/10508059_suicide.jpg)
ಪದ್ಮಾವತಿ ಆತ್ಮಹತ್ಯೆ ಮಾಡಿಕೊಂಡವರು. ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪತಿ ಭಾಸ್ಕರ್ನನ್ನು ಪೊಲೀಸರು ಬಂಧಿಸಿದ್ದಾರೆ. ವರ್ತೂರಿನ ನಿವಾಸಿ ಭಾಸ್ಕರ್ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಪದ್ಮಾವತಿ ಗೃಹಿಣಿಯಾಗಿದ್ದಳು.. 15 ವರ್ಷಗಳ ಹಿಂದೆ ಪದ್ಮಾವತಿ ಜೊತೆ ಟೆಕ್ಕಿ ಭಾಸ್ಕರ್ ಮದುವೆಯಾಗಿದ್ದರು. 11 ವರ್ಷದ ಗಂಡು ಮಗನಿದ್ದಾನೆ. ಅತಿಯಾದ ಪಾರ್ಟಿ - ಮೋಜು - ಮಸ್ತಿ ಮೈಗೂಡಿಸಿಕೊಂಡಿದ್ದ ಪತಿ ಮಹಾಶಯ ನಿರಂತರವಾಗಿ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ. ಪಾರ್ಟಿಗೆ ಹೆಂಡತಿಯನ್ನು ಕರೆದೊಯ್ದು ಸ್ನೇಹಿತರೊಂದಿಗೆ ಸೇರಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದ. ಹೇಳಿದಂತೆ ಕೆಳದಿದ್ದರೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಈತನ ಟಾರ್ಚರ್ ತಡೆಯಲಾಗದೇ ಪದ್ಮಾವತಿ ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಇನ್ನು ಇತ್ತೀಚೆಗೆ ಪಾರ್ಟಿಯೊಂದಕ್ಕೆ ಕರೆದೊಯ್ದು ಗೆಳೆಯರ ಜೊತೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಇದರಿಂದ ಮನನೊಂದು ಕಳೆದ ಜ.28 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಪದ್ಮಾವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡು ಆರೋಪಿ ಭಾಸ್ಕರ್ನನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.