ಬೆಂಗಳೂರು: ಅಕ್ರಮವಾಗಿ ಭಾರತಕ್ಕೆ ನುಸುಳಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಅರೋಪದ ಮೇರೆಗೆ ಬೆಂಗಳೂರು ಪೊಲೀಸರು ನೀಡಿದ ಮಾಹಿತಿ ಆಧಾರದ ಮೇಲೆ ಮಾನವ ಕಳ್ಳಸಾಗಣಿಕೆಯಲ್ಲಿ ತೊಡಗಿದ್ದ ಆರೋಪಿಯನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾ ಮೂಲದ ರಫಿಕ್ ಬಂಧಿತ ಆರೋಪಿ. ಬಾಂಗ್ಲಾದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಾಂಗ್ಲಾದಿಂದ ಭಾರತಕ್ಕೆ ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ರಫೀಕ್ ಸೇರಿದಂತೆ ಬಂಧಿತ ಇತರೆ ಆರೋಪಿಗಳು ಹಲವರನ್ನು ವಾಮ ಮಾರ್ಗದಿಂದ ಭಾರತಕ್ಕೆ ಕರೆತರುತ್ತಿದ್ದರು. ಪದೇ ಪದೇ ಬಾಂಗ್ಲಾದಿಂದ ಬೆಂಗಳೂರಿಗೆ ರಫೀಕ್ ಬಂದು ಹೋಗುತ್ತಿದ್ದ. ಈತ ಲೈಂಗಿಕ ದೌರ್ಜನ್ಯ ಘಟನೆಗೂ ಮುನ್ನ ನಗರಕ್ಕೆ ಬಂದು ಹೋಗಿರುವುದು ಗೊತ್ತಾಗಿದೆ.
ಪ್ರಕರಣದಲ್ಲಿ ಬಂಧಿತರಾದ 10 ಮಂದಿ ಆರೋಪಿಗಳು ಹಾಗೂ ಸಂತ್ರಸ್ತೆ ರಫೀಕ್ ಸಹಾಯದಿಂದ ಬೆಂಗಳೂರಿಗೆ ಬಂದಿದ್ದರು. ಕಳ್ಳಸಾಗಣೆ ಬಳಿಕ ವಲಸಿಗರಿಗೆ ಆಧಾರ್ ಕಾರ್ಡ್ ಮಾಡಿಸಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಸುತ್ತಿದ್ದ. ನಂತರ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆ ದಂಧೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಸುತ್ತಿದ್ದ. ಈತನ ಪತ್ತೆಗಾಗಿ ಬಲೆ ಬೀಸಲು ಪೂರ್ವ ವಿಭಾಗದ ಪೊಲೀಸರಿಗೆ ಬಾಂಗ್ಲಾದಲ್ಲಿ ಇರುವುದನ್ನು ಕಂಡುಕೊಂಡಿದ್ದಾರೆ.
ನಗರ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿರುವುದು ತಿಳಿದು ಬಂದಿದೆ. ಇದುವರೆಗೂ ಅಕ್ರಮವಾಗಿ ಎಷ್ಟು ಜನರನ್ನು ಮಾನವ ಕಳ್ಳ ಸಾಗಣಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಸಂತ್ರಸ್ತೆ:
ಅಪರಾಧ ದಂಡ ಸಂಹಿತೆ (ಸಿಆರ್ ಪಿಸಿ) 164ರ ಅಡಿ ನ್ಯಾಯಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ. ಆರೋಪಿಗಳನ್ನ ಗುರುತಿಸಿ ಹಾಗೂ ದೌರ್ಜನ್ಯವೆಸಗಿದವರ ಹಾಗೂ ಘಟನೆಗೆ ಕಾರಣ ಮತ್ತು ಆರೋಪಿಗಳ ಕ್ರೂರತೆ ಬಗ್ಗೆಯೂ ಆಕೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾಳೆ.
ಇನ್ನುಳಿದ ಆರೋಪಿಗಳ ವಿಚಾರಣೆ ಮುಂದುವರೆಸಿರುವ ಪೊಲೀಸರು ಶೀಘ್ರದಲ್ಲೇ ತನಿಖೆ ಪೂರ್ಣಗೊಳಿಸಿ ಇನ್ನೊಂದು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಇದುವರೆಗೂ 10 ಮಂದಿ ಆರೋಪಿಗಳ ಬಂಧನವಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ: ಗ್ಯಾಂಗ್ ರೇಪ್ ಪ್ರಕರಣ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಪೊಲೀಸರು