ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದಂತೆ ಹೆಲಿಕಾಪ್ಟರ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಚುನಾವಣೆ ಸಮೀಪಿಸುತ್ತಿರುವುದರಿಂದ ನಾಯಕರುಗಳು ತುರ್ತು ಪ್ರಚಾರ, ಪ್ರವಾಸಕ್ಕೆ ಹೆಲಿಕಾಪ್ಟರ್ಗಳತ್ತ ಮುಖ ಮಾಡಲಾರಂಭಿಸಿದ್ದಾರೆ.
ರಾಜ್ಯದಲ್ಲಿ 100ಕ್ಕೂ ಅಧಿಕ ಹೆಲಿಕಾಪ್ಟರ್ಗಳು ಹಾಗೂ ಮಿನಿ ವಿಮಾನಗಳಿವೆ. ಚುನಾವಣೆ ಪ್ರಚಾರ ಮತ್ತು ಸ್ಟಾರ್ ಪ್ರಚಾರಕರಿಗಾಗಿ ಹೆಲಿಕಾಪ್ಟರ್ಗಳಿಗೆ ಬೇಡಿಕೆ ಬಂದಿದ್ದು, ರಾಜಕಾರಣಿಗಳು ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಹೆಲಿಕಾಪ್ಟರ್ಗಳನ್ನು ತರಿಸಲಾರಂಭಿಸಿದ್ದಾರೆ. ನೆರೆಯ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜೈಪುರ, ದೆಹಲಿ, ಕೋಲ್ಕತಾ ಹಾಗೂ ಕೊಚ್ಚಿಯಿಂದ ಹೆಲಿಕಾಪ್ಟರ್ಗಳನ್ನು ತರಿಸಿಕೊಳ್ಳಲಾಗ್ತಿದೆ. ಈಗಾಗಲೇ ಸರಿಸುಮಾರು 150 ಹೆಲಿಕಾಪ್ಟರ್ಗಳು ಹಾಗೂ ಮಿನಿ ವಿಮಾನಗಳನ್ನ ರಾಜಕಾರಣಿಗಳು ಬುಕ್ಕಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಲಿಕಾಪ್ಟರ್ ಮತ್ತು ಮಿನಿ ವಿಮಾನಗಳ ದರ (ಗಂಟೆಗೆ): ಎರಡು ಆಸನದ ಹೆಲಿಕಾಪ್ಟರ್‌ಗೆ ಗಂಟೆಗೆ 2 ಲಕ್ಷದ 10 ಸಾವಿರ, 4 ಆಸನದ ಹೆಲಿಕಾಪ್ಟರ್‌ಗೆ ಗಂಟೆಗೆ 2 ಲಕ್ಷ 30 ಸಾವಿರ ರೂಪಾಯಿ ದರವಿದ್ದು, ಇನ್ನು 6 ಆಸನದ ಮಿನಿ ವಿಮಾನಕ್ಕೆ 2 ಲಕ್ಷ 60 ಸಾವಿರ ರೂ, 8 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ ಮೂರುವರೆ ಲಕ್ಷ ರೂಪಾಯಿ ನಿಗದಿಯಾಗಿದೆ. ಇನ್ನು 13 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ 4 ಲಕ್ಷ ರೂಪಾಯಿ ವ್ಯಯಿಸಬೇಕಿದೆ.
ಲ್ಯಾಂಡಿಂಗ್ ವ್ಯವಸ್ಥೆ: ಬೆಂಗಳೂರಿನ ಜಕ್ಕೂರು, ಹೆಚ್ಎಎಲ್, ವೈಟ್ ಫೀಲ್ಡ್ನಲ್ಲಿ ಹೆಲಿಕಾಪ್ಟರ್ಗಳ ನಿಲ್ದಾಣವಿದೆ. ಹುಬ್ಬಳ್ಳಿ, ಬೆಳಗಾವಿ, ಬೀದರ್, ಬಳ್ಳಾರಿ, ಕಲಬುರಗಿ ಸೇರಿದಂತೆ ರಾಜ್ಯದ ಹಲೆವೆಡೆ ಹೆಲಿಕಾಪ್ಟರ್ಗಳ ನಿಲ್ದಾಣಕ್ಕೆ ಜಾಗ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಸಂಪರ್ಕ ಕೊರತೆ, 20 ನಿಮಿಷ ಆಗಸದಲ್ಲೇ ಹಾರಾಡಿದ ಹೆಚ್‌ಡಿಕೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್