ಬೆಂಗಳೂರು : ಹುಬ್ಬಳ್ಳಿ-ಧಾರವಾಡ, ಕಲಬುರಗಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗಳ ಮತದಾರರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಅವಧಿ ಮುಗಿದರೂ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸದ ಸರ್ಕಾರಕ್ಕೆ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ವಕೀಲರು ಮತದಾರರ ಪಟ್ಟಿ ಅಂತಿಮಗೊಳಿಸಿರುವ ಕುರಿತು ಮಾಹಿತಿ ನೀಡಿದರು.
ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು ಮಾಹಿತಿ ನೀಡಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಮಹಾನಗರ ಪಾಲಿಕೆ, ದೊಡ್ಡಬಳ್ಳಾಪುರ ನಗರಸಭೆ ಮತ್ತು ತರೀಕೆರೆ ಪುರಸಭೆಯ ಮತದಾರರ ಅಂತಿಮ ಪಟ್ಟಿ ಸಿದ್ದವಾಗಿದೆ. ಚುನಾವಣೆ ನಡೆಸಲು ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಚುನಾವಣಾ ಆಯೋಗ ಮಂಗಳವಾರ ಸಭೆ ಆಯೋಜಿಸಿದೆ. ವಸ್ತು ಸ್ಥಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಅಲ್ಲದೇ, ಚುನಾವಣಾ ತಕರಾರು ವಿಚಾರವಾಗಿ ಧಾರವಾಡ ಪೀಠದಲ್ಲಿ ವಿಚಾರಣೆ ಹಂತದಲ್ಲಿದ್ದ ಹೊಸಪೇಟೆ, ಗದಗ-ಬೆಟಗೇರಿ, ಅಣ್ಣಿಗೇರಿ ನಗರ ಸ್ಥಳೀಯ ಸಂಸ್ಥೆಗಳ ಮೀಸಲು ಅಧಿಸೂಚನೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ. ಹಾಗೆಯೇ, ಹೊಸದಾಗಿ ಮೀಸಲು ನಿಗದಿಪಡಿಸಲು ಮೂರು ತಿಂಗಳ ಕಾಲಾವಕಾಶ ಕೇಳಿದೆ ಎಂದು ಆಯೋಗದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಸ್ಥಳೀಯ ಸ್ಥಿತಿಗತಿ ಪರಿಗಣಿಸಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಬಗ್ಗೆ ಆಗಸ್ಟ್ 3 ರೊಳಗೆ ಚುನಾವಣಾ ಆಯೋಗ ಹೈಕೋರ್ಟ್ಗೆ ಮಾಹಿತಿ ನೀಡುವಂತೆ ಸೂಚಿಸಿ. ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿತು.
ಓದಿ: ವೈದ್ಯರು ರೋಗಿಗಳ ಜೊತೆ ಕನ್ನಡದಲ್ಲೇ ಮಾತಾಡಲಿ: ವೈದ್ಯಕೀಯ ಕ್ಷೇತ್ರ ಮಾಸ ಪತ್ರಿಕೆ ಆರಂಭಕ್ಕೆ ಸೂಚನೆ