ಬೆಂಗಳೂರು : ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ - ಎಚ್‌ಎಸ್‌ಆರ್‌ಪಿ) ಉತ್ಪಾದಕರಿಗೆ ಒಪ್ಪಿಗೆ ನೀಡುವ ಸಂಬಂಧ ಮುಂದಿನ 15 ದಿನಗಳಲ್ಲಿ ಅನುಮತಿ ನೀಡುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಏಕ ಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್‌ನ ದ್ವಿಸದಸ್ಯ ಪೀಠ ಮುಂದಿನ ವಿಚಾರಣೆವರೆಗೂ ಅಮಾನತ್ತಿನಲ್ಲಿಟ್ಟಿದೆ. 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು 90 ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ 2023 ರ ಆಗಸ್ಟ್ 18ರಂದು ಅಧಿಸೂಚನೆ ಹೊರಡಿಸಿತ್ತು.
ಈ ಅಧಿಸೂಚನೆ ಜಾರಿ ಮಾಡುವುದಕ್ಕೆ 90 ದಿನಗಳ ಕಾಲಮಿತಿ ವಿಸ್ತರಣೆ ಮಾಡಬೇಕು ಎಂದು ಕೋರಿ ಎಸ್ ಗೌರಿಶಂಕರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಈ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ 2023ರ ಸೆಪ್ಟಂಬರ್ 20ರಂದು ಆದೇಶ ನೀಡಿದ್ದು, ಮುಂದಿನ 15 ದಿನಗಳಲ್ಲಿ ನಂಬರ್ ಫಲಕ ಉತ್ಪಾದಕರನ್ನು ಅಂತಿಮಗೊಳಿಸುವಂತೆ ಸೂಚನೆ ನೀಡಿದೆ. ಆದರೆ, ಈ ಸಂಬಂಧ ಸಂಬಂಧಪಟ್ಟ ಪಾಲುದಾರರೊಂದಿಗೆ ನವೆಂಬರ್ ಮೊದಲ ವಾರದಲ್ಲಿ ಸಭೆ ಕರೆಯಲಾಗಿದೆ. ಜತೆಗೆ, ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಮುಂದಿನ ವಿಚಾರಣೆವರೆಗೂ ಏಕ ಸದಸ್ಯ ಪೀಠದ ಆದೇಶವನ್ನು ಅಮಾನತ್ತಿನಡಲಾಗುತ್ತಿದೆ ಎಂದು ಆದೇಶಿಸಿತು. ಅಲ್ಲದೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ಮೇಲ್ಮನವಿ ಅರ್ಜಿಯನ್ನು ಒಟ್ಟಾಗಿ ವಿಚಾರಣೆ ನಡೆಸುವುದಾಗಿ ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 22ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು? : 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು 90 ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಶ್ನಿಸಿದ್ದ ಭಾರತೀಯ ಅತಿ ಸುರಕ್ಷಿತ ನಂಬರ್ ಫಲಕಗಳ ಉತ್ಪಾದಕರ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿ, ಕೆಲ ಕಂಪನಿಗಳಿಗೆ ಮಾತ್ರ ನಂಬರ್‌ಪ್ಲೇಟ್ ಉತ್ಪಾದನೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಇತರರಿಗೆ ಅವಕಾಶ ನೀಡಿಲ್ಲ. ಹೀಗಾಗಿ ಅಧಿಸೂಚನೆಗೆ ತಡೆ ನೀಡಬೇಕು ಎಂದು ಕೋರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಒಕ್ಕೂಟದ ಮನವಿಯನ್ನು ತಿರಸ್ಕರಿಸಿದ್ದು, ನಂಬರ್ ಫಲಕ ಉತ್ಪಾದನೆ ಮಾಡುವುದಕ್ಕೆ ಪರವಾನಿಗೆ ಹೊಂದಿರುವ ಎಲ್ಲ ಕಂಪನಿಗಳನ್ನು ಪರಿಗಣಿಸಿ ನಿಯಮಗಳ ಪ್ರಕಾರ ಮುಂದಿನ 15 ದಿನಗಳಲ್ಲಿ ಉತ್ಪಾದಕರನ್ನು ಅಂತಿಮಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿತ್ತು. ಈ ಆದೇಶವನ್ನು ದ್ವಿಸದಸ್ಯ ಪೀಠ ಅಮಾನತ್ತಿನಲ್ಲಿಟ್ಟಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ : 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು 90 ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆಯಿಂದ ಲಕ್ಷಾಂತರ ವಾಹನ ಸವಾರರಿಗೆ ತೊಂದರೆಯಾಗಲಿದೆ. ಅಲ್ಲದೆ, ಬಹುತೇಕ ಚಾಲಕರು ಅನಕ್ಷರಸ್ಥರಾಗಿದ್ದು, ಅವರಿಗೆ ಈ ಎಚ್‌ಎಸ್‌ಆರ್‌ಪಿ ನಂಬರ್ ಫಲಕದ ಕುರಿತು ಮಾಹಿತಿ ಇಲ್ಲ. ಜತೆಗೆ, ಎಚ್‌ಎಸ್‌ಆರ್‌ಪಿ ನಂಬರ್ ಫಲಕ ಅಳವಡಿಸದ ವಾಹನಗಳಿಗೆ ದಂಡ ವಿಧಿಸುವುದಾಗಿ ಸರ್ಕಾರ ತಿಳಿಸಿದೆ. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಬೇಕಾಗುತ್ತದೆ. ಜತೆಗೆ, ಹೊರ ರಾಜ್ಯದಿಂದ ಬರುವ ವಾಹನಗಳಿಗೆ ಯಾವ ರೀತಿಯಲ್ಲಿ ಕ್ರಮ ವಹಿಸಬೇಕು ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಆದ್ದರಿಂದ ಅವಧಿಯನ್ನು ವಿಸ್ತರಣೆ ಮಾಡಬೇಕು ಅರ್ಜಿದಾರ ಗೌರಿಶಂಕರ್ ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ: ಪಟ್ಟಣಗೆರೆ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ: 12 ವಾರಗಳಲ್ಲಿ ತೆರವಿಗೆ ಹೈಕೋರ್ಟ್ ಆದೇಶ