ಬೆಂಗಳೂರು: ಆಡಳಿತ ಹಾಗೂ ಪ್ರತಿಪಕ್ಷಗಳ ಸಹಕಾರ ಸಿಕ್ಕರೆ ವರ್ಷಕ್ಕೆ 60 ದಿನ ವಿಧಾನಮಂಡಲ ಅಧಿವೇಶನ ನಡೆಸಲು ನಾವು ಸಿದ್ದ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸಂಸದೀಯ ಮೌಲ್ಯಗಳ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಆತ್ಮಾವಲೋಕನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂಬುದು ನಿಜವಾದ ಮಾತು. ರಾಜಕೀಯ ಪಕ್ಷಗಳು ಚುನಾವಣೆಯನ್ನು ಹಣದ ಆಧಾರದ ಮೇಲೆ ನಡೆಸುತ್ತಿವೆ. ಹಣಕೊಟ್ಟು ಬಂದ ಯಾವುದೇ ಶಾಸಕ ಶಾಸನಸಭೆಯಲ್ಲಿ ಕುಳಿತು ಜನರ ಬಗ್ಗೆ ಕಾಳಜಿ ತೋರಿಸಲು ಸಾಧ್ಯವೇ?. ಅನಿವಾರ್ಯವಾಗಿ ಆತ್ಮವಂಚನೆ ಮಾಡಿಕೊಳ್ಳಬೇಕಾಗಿ ಬರಲಿದೆ ಎಂದರು.
ವಿಧಾನ ಪರಿಷತ್ ಸಭಾಪತಿಯಾಗಿ ನಾನು ಪರಿಷತ್ತು ಒಳಗೆ ಮೊಬೈಲ್ ನಿಷೇಧ ಮಾಡುತ್ತೇನೆ ಎಂದು ಹೇಳಿದಾಗ ಸ್ನೇಹಿತರೊಬ್ಬರು ನಾನು ತೆಗೆದುಕೊಂಡು ಬರುತ್ತೇನೆ. ಏನು ಮಾಡ್ತೀಯಾ ಎಂದು ಕೇಳಿದರು. ಇಂಥದ್ದೊಂದು ಪರಿಸ್ಥಿತಿ ಇದೆ. ಪರಿಷತ್ನಲ್ಲಿ ಸಭಾಪತಿಗಳಿಗೆ ಎದುರು ಮಾತನಾಡಬಾರದು. ಅವರ ಪೀಠದ ಮೇಲೆ ನಿಲ್ಲಬಾರದು. ಪ್ಲೆಕಾರ್ಡ್ ಪ್ರದರ್ಶನ ಮಾಡಬಾರದು, ಬಾವಿಯಲ್ಲಿದ್ದು ಘೋಷಣೆ ಕೂಗಬಾರದು, ಕಾಗದಪತ್ರಗಳನ್ನು ಹರಿದು ಎಸೆಯಬಾರದು, ಧರಣಿ ಮಾಡಬಾರದು ಘೋಷಣೆ ಕೂಗಬಾರದು ಎಂದಿದೆ. ಆದರೆ ಇದರ ಪಾಲನೆಯಲ್ಲಿ ಆಗುತ್ತಿದೆ ಎಂದು ಕೇಳಿದರು.
ಎಂತೆಂಥ ಅವರಿಗೆ ಅವಕಾಶ...
ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ತರಬೇತಿ ನೀಡಬೇಕೆಂಬ ಆಶಯ ನಮಗಿದ್ದರೆ ಪಡೆಯಲು ಅವರು ಬರುವುದಿಲ್ಲ. ವಿಧಾನಪರಿಷತ್ನಲ್ಲಿ ಇಂದು ಎಂತೆಂತಹ ಸದಸ್ಯರು ಬರುತ್ತಿದ್ದಾರೆ. ಹಿಂದೆಲ್ಲ ಸಂಗೀತಗಾರರು, ಸಾಹಿತಿಗಳಿಗೆ ಅವಕಾಶ ಇತ್ತು. ಯಾರಿಗೆ ಚುನಾವಣೆಯಲ್ಲಿ ನಿಂತು ಗೆಲ್ಲಲು ಸಾಧ್ಯವಿಲ್ಲವೋ ಅಂಥವರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಇಂದು ಅದರ ಪಾಲನೆ ಆಗುತ್ತಿಲ್ಲ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತವರನ್ನು, ರಿಯಲ್ ಎಸ್ಟೇಟ್ರನ್ನು, ಹಣವುಳ್ಳವರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನರ ಮುಂದೆ ಮುಖ ಎತ್ತಲಾಗದ ಪರಿಸ್ಥಿತಿ ಇದೆ. ಕಳೆದ ಡಿಸೆಂಬರ್ನಲ್ಲಿ ಪರಿಷತ್ನಲ್ಲಿ ಒಂದು ಅಹಿತಕರ ಘಟನೆ ನಡೆದುಹೋಯಿತು. ಇದಾದ ಬಳಿಕ ಇದನ್ನು ಗಂಜಿಕೇಂದ್ರ ಎಂದು ಸಂಬೋಧಿಸಿದರು. ಪರಿಷತ್ ಅಗತ್ಯವೇ ಇಲ್ಲ ಎಂಬ ಮಾತನಾಡಿದರು. ದೇಶದಲ್ಲಿ ಅತಿ ದೊಡ್ಡ ಇತಿಹಾಸ ರಾಜ್ಯದ ವಿಧಾನಪರಿಷತ್ತಿಗೆ ಇದೆ. ಎಲ್ಲ ರಾಜ್ಯಗಳನ್ನು ನಮ್ಮ ಬಗ್ಗೆ ಅಪಾರ ಗೌರವವಿದೆ. ಎಲ್ಲರಿಗೂ ಸಹಕಾರ ನೀಡಿಕೊಂಡು ಮುನ್ನಡೆಯುವ ಅನಿವಾರ್ಯತೆ ಎದುರಾಗಿದೆ ಎಂದರು.
ಸಂದರ್ಭೋಚಿತ ಕಾರ್ಯಕ್ರಮ...
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಮಾತನಾಡಿ, 900 ವರ್ಷಗಳ ಹಿಂದೆ ಬಸವಾದಿ ಶರಣರು ಅನುಭವ ಮಂಟಪ ರಚನೆ ಮಾಡಿ ಮೊಟ್ಟಮೊದಲ ಸಂಸತ್ ಭವನ ರಚನೆ ಮಾಡಿ ಪ್ರಪಂಚಕ್ಕೆ ಮೊದಲಿಗರೆನಿಸಿದರು. ಇಂದು ಪ್ರಪಂಚದಲ್ಲಿ ಸಂಸದೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂದರ್ಭೋಚಿತ ಎಂದರು.
ನಮ್ಮನ್ನು ನಾವು ಅವಲೋಕಿಸಿಕೊಳ್ಳಲು ರಾಜ್ಯದಲ್ಲಿ ಇಂಥದ್ದೊಂದು ಮುಂಚೂಣಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಸದೀಯ ಮೌಲ್ಯಗಳು ಕುಸಿಯದಂತೆ ಕಾಪಾಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಮೇಲೆ ಸಂಸದೀಯ ಮೌಲ್ಯವನ್ನು ಕಾಪಾಡುವ ಜವಾಬ್ದಾರಿ ಇದೆ ಎಂದರು.
ಅಧಿವೇಶನ ನಡೆಸುವುದು ಕಷ್ಟವಾಗಿದೆ
ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಪ್ರಜಾವಾಣಿ ಮಾತನಾಡಿ, ಪ್ರಪಂಚದಲ್ಲಿ ಅತಿಹೆಚ್ಚು ಚುನಾವಣೆಗೆ ಖರ್ಚು ಮಾಡುವ ರಾಷ್ಟ್ರ ಭಾರತ. ಒಂದು ಕಾಲದಲ್ಲಿ ನೂರಾನಲವತ್ತು ದಿನ ಅಧಿವೇಶನ ನಡೆಯುತ್ತಿತ್ತು. ಈಗ 60-70 ದಿನ ಅಧಿವೇಶನ ನಡೆಸುವುದು ಕಷ್ಟವಾಗಿದೆ. ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ಟೈಮ್ ಸೆನ್ಸ್ ಇರುವಂತೆ ಮಾಡಬೇಕು. ‘ನೋ ವರ್ಕ್, ನೋ ಪೇ’ ಶಾಸಕರೇ ಅಳವಡಿಸಿಕೊಳ್ಳಬೇಕು. ಆಂತರಿಕ ಬದಲಾವಣೆ ಜನಪ್ರತಿನಿಧಿಗಳೇ ಮಾಡಿಕೊಳ್ಳಬೇಕಿದೆ ಎಂದರು.
ಜೆಡಿಎಸ್ ನಾಯಕ ವೈ.ಎಸ್ ವಿ ದತ್ತಾ ಭಾಷಣ ಮಾಡಿ, ವ್ಯವಸ್ಥೆ ಸರ್ವಾಧಿಕಾರದ ಕಡೆ ಹೋಗ್ತಿದೆ ಅನಿಸ್ತಿದೆ. ಪಕ್ಷಗಳಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಬದ್ಧತೆಗಳಿಲ್ಲ. ಆದ್ದರಿಂದಲೇ ಪಕ್ಷಾಂತರ ಹೆಚ್ಚಾಗಿದೆ, ಪಕ್ಷ ನಿಷ್ಠೆ ಕಮ್ಮಿಯಾಗಿದೆ. ಯಾರಿಗೂ ಪಕ್ಷ, ಸಿದ್ಧಾಂತ, ಬದ್ಧತೆ ಬಗ್ಗೆ ಅರಿವಿಲ್ಲ. ಹಿಂದೆ ರಾಜಕೀಯ ನಾಯಕರು ಹೆಚ್ಚಿನದಾಗಿ ಸೃಷ್ಟಿಯಾಗ್ತಿದ್ರು. ಈ ಫ್ಲೆಕ್ಸ್ ನಾಯಕರು ಹೆಚ್ಚಾಗಿದ್ದಾರೆ. ಈಗ ಪಕ್ಷಗಳಲ್ಲಿ ಹೈಕಮಾಂಡ್ ಸಂಸ್ಕೃತಿ ಹೆಚ್ಚುತ್ತಿದೆ. ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವವೂ ಸಾಯುತ್ತಿದೆ. ರಾಷ್ಟ್ರೀಯ ಪಕ್ಷಗಳಿಗೆ ಯೋಗ್ಯ ಅಭ್ಯರ್ಥಿಗಳನ್ನು ಹಾಕುವ ನೈತಿಕತೆ ಬರಬೇಕಿದೆ ಎಂದರು.
ಪ್ರಶಸ್ತಿ ಕೊಡಿ...
ಶಾಸಕರಿಗೆ ಬೆಸ್ಟ್ ಶಾಸಕರು ಅನ್ನೋ ಅವಾರ್ಡ್ ಕೊಡಿ. ವವರ್ಷಕ್ಕೆ ಐವರಿಗೆ ಬೆಸ್ಟ್ ಶಾಸಕರೆಂಬ ಅವಾರ್ಡ್ ಕೊಡಿ. ಆಗ ಶಾಸಕರಲ್ಲಿ ಸಂಸದೀಯ ಮೌಲ್ಯಗಳು ಬೆಳೆಯಲು ಸಹಕಾರಿಯಾಗುತ್ತೆ ಎಂದು ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಸಲಹೆ ನೀಡಿದರು.
ಸ್ವಾಮೀಜಿಗಳು ಬೀದಿಗೆ ಇಳಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅವರ ಕ್ಷೇತ್ರವನ್ನು ಬಿಟ್ಟು ಬರುತ್ತಿದ್ದಾರೆ. ಸರ್ಕಾರದ ಸಚಿವರು ಹೋಗಿ ಬಹಿರಂಗವಾಗಿ ಸ್ವಾಮೀಜಿ ಕಾಲಿಗೆ ಬೀಳುತ್ತಾರೆ. ಇದ್ಯಾವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಆತ್ಮಾವಲೋಕನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ, ಹಿರಿಯ ಪತ್ರಕರ್ತ ಶೇಷಚಂದ್ರಿಕ ಮತ್ತಿತರ ಮುಖಂಡರು ಮಾತನಾಡಿದರು.