ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಅನುಪಸ್ಥಿತಿಯಲ್ಲಿ ಸದನ ಕಲಾಪ ಸಲಹಾ ಸಮಿತಿ ಸಭೆ ನಡೆಯಿತು. ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸದನ ಕಲಾಪ ಸಲಹಾ ಸಮಿತಿ ಸಭೆಗೆ ಹೋಗದಿರಲು ನಿರ್ಧರಿಸಿತ್ತು. ಹೀಗಾಗಿ ಕಾಂಗ್ರೆಸ್ ಸದಸ್ಯರು ಇಂದು ನಡೆದ ಸಭೆಗೆ ಗೈರಾಗಿದ್ದರು. ಇತ್ತ ಜೆಡಿಎಸ್ ಕಡೆಯಿಂದ ವೆಂಕಟರಾವ್ ನಾಡಗೌಡ ಪಾಲ್ಗೊಂಡಿದ್ದರು. ವೆಂಕಟರಾವ್ ನಾಡಗೌಡ ಸುಮಾರು 10 ನಿಮಿಷ ತಡವಾಗಿ ಸಭೆಗೆ ಆಗಮಿಸಿದರು.
ಉಳಿದಂತೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸ್ಪೀಕರ್ ಕಾಗೇರಿ, ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಉಮೇಶ್ ಕತ್ತಿ, ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್ ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ. ರಾಜಕೀಯ ಕಾರಣಕ್ಕೆ ಸದನ ಬಹಿಷ್ಕಾರ ಮಾಡುವುದು ಸರಿಯಲ್ಲ. ಏನೇ ಇದ್ದರೂ ವಿಧಾನಸಭೆಯೊಳಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳೋಣ. ಬಜೆಟ್ ಬಗ್ಗೆಯೆ ಚರ್ಚೆ ಮಾಡದೇ ಬಹಿಷ್ಕಾರ ಮಾಡಿದರೆ ಏನು ಪ್ರಯೋಜನ? ಸಭೆಯಲ್ಲಿ ಬಂದು ಜನರ ವಿಚಾರಗಳನ್ನು ಚರ್ಚೆ ಮಾಡೋಣ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಿಂದೆ ಇತಿಹಾಸದಲ್ಲಿ ಯಾವತ್ತೂ ಕೂಡ ಈ ತರಹ ಆಗಿಲ್ಲ. ಮಾಧ್ಯಮಗಳ ಮೂಲಕವೇ ನಾನು ಸಿದ್ದರಾಮಯ್ಯರಲ್ಲಿ ಸಭೆಗೆ ಹಾಜರಾಗುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ: 4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO
ಜಾರಕಿಹೊಳಿ ಹೇಳಿದಂತೆ 2+3+4 ಬಗ್ಗೆ ನನಗೆ ಗೊತ್ತಿಲ್ಲ: ಸಿಡಿ ಪ್ರಕರಣ ಸಂಬಂಧ ದೂರು ದಾಖಲಾದ ದಿನದಿಂದ ಎಲ್ಲವನ್ನೂ ಗಮನಿಸುತ್ತಿದ್ದೇವೆ. ಲಾ ಬುಕ್ ನಲ್ಲಿ ಏನಿದೆಯೋ ಅದರ ಪ್ರಕಾರ ನಡೆಯುತ್ತೇವೆ. ಎಲ್ಲ ಆಯಾಮಗಳಲ್ಲೂ ಕೂಡ ವಿಚಾರಣೆ ಮಾಡುತ್ತೇವೆ. ಬೇರೆ ರೀತಿಯ ವಿಚಾರಣೆ ನಡೆಸುವ ಬಗ್ಗೆ ಸಿಎಂ ಬಳಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಒಬ್ಬ ಮಹಾನ್ ನಾಯಕನ ಪಾತ್ರ ಇದೆ ಎಂಬ ರಮೇಶ್ ಜಾರಕಿಹೊಳಿ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಜಾರಕಿಹೊಳಿ ಹೇಳಿದಂತೆ 2+3+4 ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಸಿಎಂ ಜೊತೆಗೂ ಕೂಡ ಚರ್ಚೆ ಮಾಡಿ ತನಿಖೆ ಮಾಡುತ್ತೇವೆ. ಈ ಬಗ್ಗೆ ಅವರ ಬಳಿ ಮಾಹಿತಿ ಪಡೆದು, ಆ ಸಂಬಂಧ ವಿಚಾರಣೆ ನಡೆಸಲಾಗುತ್ತದೆ ಎಂದರು.