ಬೆಂಗಳೂರು: ಕೊರೊನಾ 2ನೇ ಅಲೆಗೆ ರಾಜ್ಯ ತತ್ತರಿಸುತ್ತಿದ್ದು, ಬೆಡ್ ಹಾಗೂ ಆಕ್ಸಿಜನ್ಗಾಗಿ ಜನ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಸರ್ಕಾರ ನಾನಾ ವ್ಯವಸ್ಥೆಗಳನ್ನ ಮಾಡುತ್ತಿದೆ. ಈ ಹಿನ್ನೆಲೆ ದಂತ ವೈದ್ಯಕೀಯ ಆಸ್ಪತ್ರೆಯನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲಾಗಿದೆ.
ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬೆಡ್, ಆಕ್ಸಿಜನ್ ವ್ಯವಸ್ಥೆ ಮಾಡುತ್ತಿದ್ದು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚೋಳ ನಗರದ ರಾಜೀವ್ ಗಾಂಧಿ ದಂತ ವೈದ್ಯಕೀಯ ಆಸ್ಪತ್ರೆಯನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಸಹಭಾಗಿತ್ವದಲ್ಲಿ 100 ಬೆಡ್ ಗಳ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಈ ಕೋವಿಡ್ ಆಸ್ಪತ್ರೆಗೆ ಪೂರ್ವ ವಲಯ ಕೋವಿಡ್ ಮೇಲ್ವಿಚಾರಣೆ ಉಸ್ತುವಾರಿ ಹೊತ್ತಿರುವ ಸಚಿವ ಸೋಮಣ್ಣ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಸಚಿವ ವಿ. ಸೋಮಣ್ಣ, ರಾಜೀವ್ ಗಾಂಧಿ ದಂತ ವೈದ್ಯಕೀಯ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದ್ದು, ದಿನದ 24 ಗಂಟೆಯೂ 3 ಪಾಳಿಯಲ್ಲಿ ನುರಿತ ವೈದ್ಯರು, ನರ್ಸ್ ಗಳು ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಕೋವಿಡ್ ಸೋಂಕಿತರು ಭಯಪಡುವ ಅವಶ್ಯಕತೆ ಇಲ್ಲ. ನೀವು ಗಟ್ಟಿ ಮನಸ್ಸು ಮಾಡಿ ರೋಗದ ವಿರುದ್ಧ ಹೋರಾಡಿ ಎಂದರು. ಹಾಗೆಯೇ ಕ್ಷೇತ್ರದ ಶಾಸಕ ಭೈರತಿ ಬಸವರಾಜು ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೋವಿಡ್ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಶಾಸಕರು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸಹಕಾರ ನೀಡುತ್ತಿದ್ದಾರೆ. ರಾಜೀವ್ ಗಾಂಧಿ ದಂತ ವೈದ್ಯಕೀಯ ಆಸ್ಪತ್ರೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಓದಿ: ಲಸಿಕೆ ಕೊರತೆ ವಾಸ್ತವಾಂಶ ತಿಳಿಸಲು ಶ್ವೇತಪತ್ರ ಹೊರಡಿಸಿ: ಹೈಕೋರ್ಟ್ ನಿರ್ದೇಶನ