ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ತನಿಖೆ ನಡೆಸಿದ್ದು, ಪೊಲೀಸರು ಸವಾಲು ಎದುರಿಸಿ ಆರೋಪಿಗಳನ್ನು ಬಂಧನ ಮಾಡಿದ್ದಾರೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಕೆ.ಕೆ.ಗೆಸ್ಟ್ ಹೌಸ್ನಲ್ಲಿ ಮಾತನಾಡಿದ ಅವರು, ಮೈಸೂರಿನ ಪ್ರಕರಣ ಸಂಬಂಧ ಪೊಲೀಸರು ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ. ಐವರನ್ನು ವಶಕ್ಕೆ ಪಡೆದಿದ್ದಾರೆ. ನಾನು ಸರ್ಕಾರದ ಪರವಾಗಿ ಪೊಲೀಸ್ ಇಲಾಖೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.
ಸಿಎಂ ಮತ್ತು ನಾನು ಪೊಲೀಸರಿಗೆ ಆರೋಪಿಗಳ ಶೀಘ್ರ ಬಂಧನಕ್ಕೆ ಸೂಚಿಸಿದ್ದೆವು. ಆರೋಪಿಗಳನ್ನು ಶೀಘ್ರ ಬಂಧಿಸುತ್ತಾರೆಂಬ ವಿಶ್ವಾಸ ಇತ್ತು. ಇಂತಹ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಪೊಲೀಸ್ ಇಲಾಖೆ ಒಳ್ಳೆಯ ಮೆಸೇಜ್ ಪಾಸ್ ಮಾಡಿದೆ. ತಪ್ಪು ಮಾಡಿದವರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಅವರ ಹೆಡೆಮುರಿ ಕಟ್ಟುತ್ತೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಆರೋಪಿಗಳೆಲ್ಲರೂ ಕಾರ್ಮಿಕರು:
ಘಟನೆ ನಡೆದಾಗ ಮೈಸೂರಿನ ಜನರಲ್ಲಿ ಆತಂಕ ಮನೆ ಮಾಡಿತ್ತು. ಪೊಲೀಸರಿಗೆ ಸವಾಲಿತ್ತು. ತಮಿಳುನಾಡಿನಿಂದ ಆರೋಪಿಗಳು ನಿತ್ಯ ಬಂದು ಹೋಗುತ್ತಿದ್ದರು. ಯಾರೂ ವಿದ್ಯಾರ್ಥಿಗಳು ಈ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಎಲ್ಲರೂ ಕಾರ್ಮಿಕರಾಗಿದ್ದಾರೆಂದು ಸ್ಪಷ್ಟಪಡಿಸಿದರು.
ನ್ಯಾಯಾಲಯದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಇನ್ನೊಂದು ಭಾಗವಾಗಿದೆ. ಇದು ಬಹಳ ಮುಖ್ಯವಾಗಿದೆ. ಪ್ರಕರಣ ಸಂಬಂಧ ಸಂತ್ರಸ್ತೆ ಹೇಳಿಕೆ ಕೊಡುವ ಪರಿಸ್ಥಿತಿಯಲ್ಲಿರಲಿಲ್ಲ. ಅವರ ಮೇಲೆ ಒತ್ತಡವನ್ನೂ ಹಾಕಲು ಆಗುವುದಿಲ್ಲ. ಹೀಗಾಗಿ ಬಂಧನ ಸ್ವಲ್ಪ ವಿಳಂಬವಾಯಿತು. ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಹೇಳಿಕೆ ಕೊಡುವಂತೆ ಮನವೊಲಿಕೆ ಮಾಡಲಾಗುತ್ತಿದೆ ಎಂದರು.
ವಿಶೇಷ ಬಂದೋ ಬಸ್ತ್ ನಿಯೋಜನೆ:
ಅತ್ಯಾಚಾರ ಪ್ರಕರಣ ಮರುಕಳಿಸದಂತೆ ವಿಶೇಷ ಬಂದೋ ಬಸ್ತ್ ನಿಯೋಜಿಸಲಾಗಿದೆ. ಚಾಮುಂಡಿ ಬೆಟ್ಟದ ಸುತ್ತಮುತ್ತ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಸಂಜೆ 7 ಗಂಟೆ ಬಳಿಕ ಆ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲು ಸೂಚಿಸಲಾಗಿದೆ. ಪ್ರತಿನಿತ್ಯ ರೌಂಡ್ಸ್ ಹಾಕಲು ಹೇಳಲಾಗಿದೆ. ಅದು ನಿನ್ನೆಯಿಂದ ಪ್ರಾರಂಭವಾಗಿದೆ. ಸಂಜೆ 7 ಗಂಟೆ ಬಳಿಕ ತೆರಳುವುದು ಅನಿವಾರ್ಯ ಇದ್ದರೆ ಅವರಿಗೆ ಭದ್ರತೆ ನೀಡಲಾಗುವುದು ಎಂದು ತಿಳಿಸಿದರು.