ಬೆಂಗಳೂರು: ಬಿಟ್ ಕಾಯಿನ್ (Bitcoin) ಎಂಬುದು ಕನ್ನಡಿಯೊಳಗಿನ ಗಂಟು ಅಷ್ಟೇ. ಇಲ್ಲದೇ ಇರುವ ವಿಷಯಗಳನ್ನು ದೊಡ್ಡ ಭೂತದ ತರ ಮಾಡಿ ಮಾಧ್ಯಮಗಳ ಮುಂದೆ ಪ್ರತಿದಿನ ಕಾಂಗ್ರೆಸ್ ನಾಯಕರು ಪೋಸ್ ಕೊಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಕುರಿತಾಗಿ ಸಿಎಂ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾನೂ ಸ್ಪಷ್ಟನೆ ನೀಡಿದ್ದೇನೆ. ಕಾಂಗ್ರೆಸ್‌ನವರು ಒಂದು ಸುಳ್ಳನ್ನು ನೂರು ಬಾರಿ ಹೇಳುವ ಮೂಲಕ ಸತ್ಯ ಆಗುತ್ತದೆ ಎಂಬ ನೀತಿಯಲ್ಲಿ ನಂಬಿಕೆ ಇಟ್ಟಿದ್ದಾರೆ. ಇದನ್ನು ಮುಂದುವರಿಸಿಕೊಂಡು ಹೋಗುವುದರಿಂದ ರಾಜಕೀಯ ಲಾಭ ಪಡೆಯಬಹುದು ಎಂದು ಅಂದುಕೊಂಡಿದ್ದಾರೆ. ಸ್ವತಃ ಕಾಂಗ್ರೆಸ್‌ನವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು. 2018ರಲ್ಲಿ ಶ್ರೀಕಿಯನ್ನು ಅವರ ಕಾರ್ಯಕರ್ತನೊಬ್ಬನ ಮಗನ ಜೊತೆ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ವಿಚಾರಣೆಗೆ ಏಕೆ ಒಳಪಡಿಸಿಲ್ಲ?. ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ಕೊಡಲಿ ಎಂದು ಸವಾಲು ಹಾಕಿದರು.
ಯಾವ ಕಾರಣಕ್ಕಾಗಿ ಆತ ಕಾಂಗ್ರೆಸ್ ಮುಖಂಡರೊಬ್ಬರ ಮಗನ ಜೊತೆ ಸ್ಟಾರ್ ಹೋಟೆಲ್‌ನಲ್ಲಿದ್ದ?. ಅಲ್ಲಿ ಏಕೆ ಆ ಗಲಭೆ ನಡೆಯಿತು?. ಮತ್ತೊಮ್ಮೆ ಆತ ಸಿಕ್ಕಿಹಾಕಿಕೊಂಡಿದ್ದು ಕಾಂಗ್ರೆಸ್ ಮಾಜಿ ಶಾಸಕರ ಮಗನ ಜೊತೆ. ಅದು ಡ್ರಗ್ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ನಾವು ಆತನನ್ನು ವಶಕ್ಕೆ ಒಡೆದ ನಂತರ ಡ್ರಗ್ ಜೊತೆಗೆ ಬಿಟ್ ಕಾಯಿನ್ ಬಗ್ಗೆನೂ ಬಾಯಿ ಬಿಡಿಸಿದೆವು. ಅತ್ಯಂತ ಪಾರದರ್ಶಕವಾಗಿ ವಿಚಾರಣೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಪೊಲೀಸರು ಹಾಗೂ ನಮ್ಮನ್ನು ಶ್ರೀಕಿ ಯಾಮಾರಿಸಿದ್ದಾನೆ. ಮೊದಲಿಗೆ 31.8 ಬಿಟ್ ಕಾಯಿನ್ ತೋರಿಸುತ್ತಾನೆ. ಆ ಬಳಿಕ ಪರಿಶೀಲಿಸಿದಾಗ ಅದು ನಕಲಿ ಅನ್ನೋದು ಗೊತ್ತಾಗುತ್ತದೆ. 9 ಕೋಟಿ ರೂ.ಇಲ್ಲಿಗೂ ಬರಲಿಲ್ಲ, ಎಲ್ಲಿಗೂ ಹೋಗಲಿಲ್ಲ. ಅದು ಅಲ್ಲೇ ಇತ್ತು. ಆದರೆ ಒಂದು ವರ್ಗಾವಣೆಯನ್ನು ಮಾತ್ರ ತೋರಿಸಿದ್ದಾನೆ.
ಇದನ್ನೆಲ್ಲಾ ಇಟ್ಟುಕೊಂಡು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ಯಾರೂ ಏನೂ ಹಾಗೆ ಯಾಮಾರಿಸಲು ಸಾಧ್ಯವಿಲ್ಲ. ಯಾರದ್ದಾದರೂ ಖಾತೆಗೆ ಹೋಗುತ್ತದೆ. ಅದಕ್ಕೆ ಖಾಸಗಿ ಕೀ ಬೇಕು. ಕಾಂಗ್ರೆಸ್ ನವರು ಅದನ್ನು ಸಾಬೀತು ಮಾಡಬೇಕು. ಹೊರತಾಗಿ ಅನಾವಶ್ಯಕವಾಗಿ ಅನುಮಾನದಿಂದ ಏನೇನು ಹೇಳಬಾರದು ಎಂದರು.
ಅಧಿವೇಶನದಲ್ಲಿ ಬಿಟ್ ಕಾಯಿನ್ ಪ್ರಸ್ತಾಪಿಸುವ ಬಗ್ಗೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. 2018ರಲ್ಲಿ ಕಾಂಗ್ರೆಸ್‌ನವರು ಬೇಕಾಬಿಟ್ಟಿಯಾಗಿ ಬಿಟ್ಟು ಕಳುಹಿಸಿದ ಶ್ರೀಕಿಯನ್ನು ನಮ್ಮ ಸರ್ಕಾರ ಬಂಧಿಸಿದೆ. ಆತನ ಬಾಯಿ ಬಿಡಿಸಿರುವುದು ನಮ್ಮ ಸರ್ಕಾರ. ಪಾರದರ್ಶಕವಾಗಿ ವಿಚಾರಣೆಯನ್ನು ನಾವು ನಡೆಸಿದ್ದೇವೆ.
ಇಂಟರ್‌ಪೋಲ್, ಕೇಂದ್ರ ಸರ್ಕಾರದ ಎಲ್ಲಾ ಏಜೆನ್ಸಿಗಳಿಗೆ ಮಾಹಿತಿ ನೀಡಿದವರು ನಾವು. ಆದರೂ ನಾವೇ ಏನೋ ಮಾಡಿದ್ದೇವೆ ಎಂದು ಬಿಂಬಿಸಲು ಹೋಗುತ್ತಾರೆ ಎಂದರೆ ಇವರು ಯಾರು?. ಇವರು ಏನು ಮಾಡಿದ್ದಾರೆ?. ಶ್ರೀಕಿಯನ್ನು ಏಕೆ ವಿಚಾರಣೆ ಮಾಡಿರಲಿಲ್ಲ. ಇವರ ಮಕ್ಕಳಿಗೆ ಶ್ರೀಕಿಗೆ ಏನು ಸಂಬಂಧ?. ಅದನ್ನು ಕಾಂಗ್ರೆಸ್‌ನವರು ಹೇಳಬೇಕು ಎಂದರು.
ದಿಲ್ಲಿಯಲ್ಲಿ ಒಬ್ಬರು ಸುದ್ದಿಗೋಷ್ಟಿ ಮಾಡುತ್ತಾರೆ, ಇಲ್ಲಿ ಒಬ್ಬರು ಪ್ರೆಸ್‌ಮೀಟ್ ಮಾಡುತ್ತಾರೆ. ಐಐಎಸ್‌ಸಿ ತಜ್ಞರನ್ನು ಕೂರಿಸಿ ವಿಚಾರಣೆ ಮಾಡಿದ್ದೇವೆ. ಎಲ್ಲವೂ ಪಾರದರ್ಶಕವಾಗಿದೆ. ಬೊಮ್ಮಾಯಿ ಸರ್ಕಾರದ ನಡವಳಿಕೆ ನೋಡಿ ಜನ ಸಂತೋಷಪಟ್ಟಿದ್ದಾರೆ. ಹಾಗಾಗಿ ಕಾಂಗ್ರೆಸ್‌ನವರು ಕಳೆದು ಹೋಗುತ್ತಿದ್ದಾರೆ. ಬೊಮ್ಮಾಯಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್‌ಗೆ ಬೇರೆ ಇಶ್ಯೂನೇ ಇಲ್ಲ. ಬೆಳಗಾವಿ ಅಧಿವೇಶನ ಇರಲಿ ಬೇರೆಲ್ಲಾದರೂ ಸರಿ ಇದನ್ನು ಎದುರಿಸಲು ನಾವು ಸಿದ್ಧ ಎಂದು ಹೇಳಿದರು.
'ಕಾಂಗ್ರೆಸ್‌ನವರ ಮೇಲೆನೇ ಅನುಮಾನವಿದೆ':
ಶ್ರೀಕಿಗೆ ಪ್ರಾಣ ಬೆದರಿಕೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶ್ರೀಕಿಗೆ ಪ್ರಾಣ ಬೆದರಿಕೆ ಇದೆ ಎಂದು ಪದೇ ಪದೇ ಹೇಳುವುದರಲ್ಲೇ ನನಗೆ ಅನುಮಾನ ಇದೆ ಎಂದರು. ಕಾಂಗ್ರೆಸ್‌ನವರು ಏನಾದರೂ ಮಾಡಿ ಹಾಕಿ ಸರ್ಕಾರದ ತಲೆಗೆ ಕಟ್ಟುತ್ತಾರೋ ಎಂಬ ಆತಂಕ ಇದೆ. ಈ ಬಗ್ಗೆ ನಾನು ಸಿಎಂ ಬಳಿ ಮಾತನಾಡುತ್ತೇನೆ ಎಂದು ಸಚಿವರು ತಿಳಿಸಿದರು.